HomeGadag Newsಜೀವನದ ಯಶಸ್ಸು ಹುದ್ದೆಯಲ್ಲ, ಆತ್ಮತೃಪ್ತಿಯಲ್ಲಿ: ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು

ಜೀವನದ ಯಶಸ್ಸು ಹುದ್ದೆಯಲ್ಲ, ಆತ್ಮತೃಪ್ತಿಯಲ್ಲಿ: ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ: ಜೀವನದ ನಿಜವಾದ ಮೌಲ್ಯವು ಹುದ್ದೆ, ಅಧಿಕಾರ ಅಥವಾ ಸಂಪತ್ತಿನಲ್ಲಿ ಅಡಗಿಲ್ಲ. ಬದುಕಿನ ಕೊನೆಯಲ್ಲಿ ಯಾವುದೇ ಪಶ್ಚಾತ್ತಾಪವಿಲ್ಲದೆ ಆತ್ಮತೃಪ್ತಿಯಿಂದ ಬದುಕುವುದೇ ನಿಜವಾದ ಯಶಸ್ಸು ಎಂದು ಹಾಲಕೆರೆಯ ಶ್ರೀ ಅನ್ನದಾನೇಶ್ವರ ಸಂಸ್ಥಾನ ಮಠದ ಪೂಜ್ಯ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ಹೇಳಿದರು.

ನಗರದ ವಾಣಿಜ್ಯ ಭವನದ ಬನಪ್ಪ ಸಂಕಪ್ಪ ಸಂಕಣ್ಣವರ ಸಭಾಭವನದಲ್ಲಿ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ವತಿಯಿಂದ ಲಿಂ. ಪಂಚಾಕ್ಷರಯ್ಯ ಎಸ್. ಸಂಶಿಮಠ ಅವರ ಸ್ಮರಣಾರ್ಥ ಆಯೋಜಿಸಿದ್ದ ಸಂಶಿಮಠ ದತ್ತಿ ಉಪನ್ಯಾಸ ಹಾಗೂ ಸಾಧಕರ ಸನ್ಮಾನ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಯುವಕರು ಸರ್ಕಾರಿ ಉದ್ಯೋಗವನ್ನೇ ಅಂತಿಮ ಗುರಿಯಾಗಿಸಿಕೊಳ್ಳದೆ, ಉದ್ಯಮಶೀಲತೆ ಹಾಗೂ ಸ್ವಯಂ ಉದ್ಯೋಗದತ್ತ ಮುಖ ಮಾಡಬೇಕು. ಸರ್ಕಾರ ಎಲ್ಲರಿಗೂ ಉದ್ಯೋಗ ನೀಡಲು ಸಾಧ್ಯವಿಲ್ಲ. ಹೀಗಾಗಿ ಸ್ವಾವಲಂಬನೆ, ಧೈರ್ಯ ಹಾಗೂ ಹೊಸ ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವಾಣಿಜ್ಯೋದ್ಯಮ ಸಂಸ್ಥೆಗಳು ವ್ಯಾಪಾರಕ್ಕೆ ಮಾತ್ರ ಸೀಮಿತವಾಗದೆ, ಸಮಾಜಮುಖಿ ಚಟುವಟಿಕೆಗಳು, ಪ್ರತಿಭೆಗಳ ಪ್ರೋತ್ಸಾಹ ಹಾಗೂ ಯುವಜನರಿಗೆ ಮಾರ್ಗದರ್ಶನ ನೀಡುವ ಮೂಲಕ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಬೇಕು. “ದೇಹಸಂಪತ್ತು, ವಿಚಾರಸಂಪತ್ತು ಮತ್ತು ಚೈತನ್ಯವೇ ವ್ಯಕ್ತಿಯ ನಿಜವಾದ ಸಂಪತ್ತು” ಎಂದು ಶ್ರೀಗಳು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಮಾಜಿ ಅಧ್ಯಕ್ಷ ಸಿದ್ರಾಮಯ್ಯ ಸಂಶಿಮಠ, ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗೌರವಿಸುವ ಉದ್ದೇಶದಿಂದ ಈ ದತ್ತಿ ಉಪನ್ಯಾಸ ಹಾಗೂ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಶರಣಬಸಪ್ಪ ಗುಡಿಮನಿ, ಹಿರಿಯರ ಮಾರ್ಗದರ್ಶನ ಯುವಜನರಿಗೆ ಸ್ಫೂರ್ತಿಯಾಗಿದ್ದು, ಉದ್ಯಮ, ಶಿಕ್ಷಣ, ಕ್ರೀಡೆ ಹಾಗೂ ಸಮಾಜಸೇವೆಯಲ್ಲಿ ಇನ್ನಷ್ಟು ಸಾಧನೆ ಮಾಡಲು ಯುವಕರು ಮುಂದಾಗಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ರಾಜ್ಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಕ್ರೀಡಾಪಟುಗಳು, ಸೈಕ್ಲಿಸ್ಟ್‌ಗಳು, ತರಬೇತುದಾರರು, ಚಾರ್ಟರ್ಡ್ ಅಕೌಂಟೆಂಟ್‌ಗಳು, ರಕ್ತದಾನ, ಶಿಕ್ಷಣ, ವಿಶೇಷಚೇತನರ ಸೇವೆ, ಆರೋಗ್ಯ ಜಾಗೃತಿ, ರೋಟರಿ ಹಾಗೂ ಲಯನ್ಸ್ ಕ್ಲಬ್ ಪದಾಧಿಕಾರಿಗಳು ಮತ್ತು ಸಮಾಜಸೇವಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸನ್ಮಾನಿತರ ಪರವಾಗಿ ಶ್ರೀಧರ ಧರ್ಮಾಯತ, ಪ್ರವೀಣ ವಾರಕರ, ರಮೇಶ ಶಿಗ್ಲಿ, ಸರೋಜಾ ಕುಲಕರ್ಣಿ, ಮಾಲತಿ ಇನಾಮತಿ, ಪೂಜಾ ಗುಗ್ಗರಿ ಹಾಗೂ ಕವಿತಾ ದಂಡಿನ ಮಾತನಾಡಿದರು.

ಚನ್ನವೀರಪ್ಪ ಹುಣಸಿಕಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಈಶಣ್ಣ ಮುನವಳ್ಳಿ, ವಿ.ಕೆ. ಗುರುಮಠ, ವಿಜಯಕುಮಾರ ಮಾಟಲದಿಣ್ಣಿ, ದತ್ತು ಬೇವಿನಕಟ್ಟಿ ಹಾಗೂ ರಾಘವೇಂದ್ರ ಕಾಲವಾಡ ಪರಿಚಯಿಸಿದರು. ದಾನಯ್ಯ ಗಣಾಚಾರಿ ವಂದಿಸಿದರು.

ಕಾರ್ಯಕ್ರಮದಲ್ಲಿ ಜಯದೇವ ಮೆಣಸಗಿ, ಪ್ರಕಾಶ ಉಗಲಾಟದ, ಸಿದ್ರಾಮಪ್ಪ ಉಮಚಗಿ, ರಾಘವೇಂದ್ರ ಕಾಲವಾಡ, ಅಶೋಕ ಸಂಕಣ್ಣವರ, ಅರವಿಂದ ಕಾಮತ, ಚಂದ್ರು ಬಾಳಿಹಳ್ಳಿಮಠ ಸೇರಿದಂತೆ ವಾಣಿಜ್ಯೋದ್ಯಮ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು, ಉದ್ಯಮಿಗಳು, ಕ್ರೀಡಾಪಟುಗಳು, ಸಮಾಜಸೇವಕರು ಹಾಗೂ ಗಣ್ಯರು ಉಪಸ್ಥಿತರಿದ್ದರು.

“ಜೀವನದ ನಿಜವಾದ ಸಂಪತ್ತು ಹುದ್ದೆ ಅಥವಾ ಹಣವಲ್ಲ; ಆತ್ಮತೃಪ್ತಿ, ಸಮಾಜಸೇವೆ ಮತ್ತು ಚೈತನ್ಯವೇ ಮನುಷ್ಯನ ಶ್ರೇಷ್ಠ ಆಸ್ತಿ.”

— ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು

ಹಾಲಕೆರೆ ಶ್ರೀ ಅನ್ನದಾನೇಶ್ವರ ಸಂಸ್ಥಾನ ಮಠ

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img