ಬೆಂಗಳೂರು: ಮುಖಕ್ಕೆ ಮಾಸ್ಕ್ ಧರಿಸಿ ಸಾಮಾನ್ಯ ಪ್ರಯಾಣಿಕರಂತೆ ಬಿಎಂಟಿಸಿ ಬಸ್ನಲ್ಲಿ ಸಂಚರಿಸಿ ಸಾರಿಗೆ ವ್ಯವಸ್ಥೆಯ ರಿಯಾಲಿಟಿ ಚೆಕ್ ನಡೆಸಿದ್ದ ಸಚಿವ ಭೈರತಿ ಸುರೇಶ್ ಅವರಿಗೆ ಉದ್ಧಟತನದಿಂದ ವರ್ತಿಸಿದ್ದ ಆರೋಪದಡಿ ಚಾಲಕ ಕಂ ನಿರ್ವಾಹಕನನ್ನು ಬಿಎಂಟಿಸಿ ಅಮಾನತುಗೊಳಿಸಿದೆ.
ರಾಮಕೃಷ್ಣ ಟಿ.ಜಿ. ಅಮಾನತುಗೊಂಡ ಸಿಬ್ಬಂದಿಯಾಗಿದ್ದಾರೆ.
ಜುಲೈ 11ರಂದು ರಾತ್ರಿ ಸುಮಾರು 9.30ರ ವೇಳೆಗೆ ಸಚಿವ ಭೈರತಿ ಸುರೇಶ್ ಹೆಬ್ಬಾಳದಿಂದ ಭೂಪಸಂದ್ರಕ್ಕೆ ತೆರಳುತ್ತಿದ್ದ ಬಿಎಂಟಿಸಿ ಬಸ್ ಏರಿದ್ದರು. ತಮ್ಮ ಗುರುತು ಮರೆಮಾಚಿಕೊಂಡು ಸಾಮಾನ್ಯ ಪ್ರಯಾಣಿಕರಂತೆ ಪ್ರಯಾಣಿಸಿದ ಸಚಿವರು, ಬಸ್ ಸಿಬ್ಬಂದಿಯ ಕಾರ್ಯವೈಖರಿ ಹಾಗೂ ಪ್ರಯಾಣಿಕರಿಗೆ ನೀಡಲಾಗುತ್ತಿರುವ ಸೇವೆಯನ್ನು ಖುದ್ದಾಗಿ ಪರಿಶೀಲಿಸಿದ್ದರು.
ಪ್ರಯಾಣದ ವೇಳೆ ಟಿಕೆಟ್ ಪಡೆಯಲು ಸಚಿವರು ಹಣ ನೀಡಿದ್ದರು. ಈ ಸಂದರ್ಭದಲ್ಲಿ ಚಾಲಕ ಕಂ ನಿರ್ವಾಹಕ ರಾಮಕೃಷ್ಣ ಟಿ.ಜಿ. ಆರು ರೂಪಾಯಿ ಚಿಲ್ಲರೆ ನೀಡುವಂತೆ ಕೇಳಿದ್ದಾರೆ. ತಮ್ಮ ಬಳಿ ಚಿಲ್ಲರೆ ಇಲ್ಲ ಎಂದು ಸಚಿವರು ತಿಳಿಸಿದಾಗ, ‘ಚಿಲ್ಲರೆ ಕೊಡಿ, ಇಲ್ಲದಿದ್ದರೆ ಬಸ್ನಿಂದ ಕೆಳಗೆ ಇಳಿಯಿರಿ’ ಎಂದು ಉದ್ಧಟತನದಿಂದ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಯುಪಿಐ ವ್ಯವಸ್ಥೆ ಇದ್ದರೂ ಮಾಹಿತಿ ನೀಡದ ಸಿಬ್ಬಂದಿ:
ಬಿಎಂಟಿಸಿ ಬಸ್ಗಳಲ್ಲಿ 2024ರಿಂದಲೇ ಯುಪಿಐ ಮೂಲಕ ಡಿಜಿಟಲ್ ಟಿಕೆಟ್ ಪಾವತಿ ವ್ಯವಸ್ಥೆ ಜಾರಿಯಲ್ಲಿದೆ. ನಿಗಮದ ಒಟ್ಟು ಟಿಕೆಟ್ ಆದಾಯದಲ್ಲಿ ಸುಮಾರು ಶೇ.53ರಷ್ಟು ಹಣ ಯುಪಿಐ ಮೂಲಕವೇ ಸಂಗ್ರಹವಾಗುತ್ತಿದೆ.
ಆದರೆ, ಚಿಲ್ಲರೆ ಇಲ್ಲದ ಸಂದರ್ಭದಲ್ಲಿ ಪ್ರಯಾಣಿಕರಿಗೆ ಯುಪಿಐ ಪಾವತಿ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಬೇಕಿದ್ದ ನಿರ್ವಾಹಕ ಕರ್ತವ್ಯದಲ್ಲಿ ವಿಫಲರಾಗಿದ್ದಾರೆ ಎಂದು ಬಿಎಂಟಿಸಿ ಪರಿಗಣಿಸಿದೆ. ಸಿಬ್ಬಂದಿಯ ವರ್ತನೆಯಿಂದ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಂಸ್ಥೆಯ ವಿರುದ್ಧ ನಕಾರಾತ್ಮಕ ಪ್ರಚಾರಕ್ಕೆ ಅವಕಾಶ ಉಂಟಾಗಿದೆ ಎಂದು ನಿಗಮ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಿ ರಾಮಕೃಷ್ಣ ಟಿ.ಜಿ. ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಫನ್ ವರ್ಲ್ಡ್ ಬಳಿ ಹೊಸ ಬಸ್ ನಿಲ್ದಾಣ:
ಸಚಿವರ ರಿಯಾಲಿಟಿ ಚೆಕ್ ವೇಳೆ ಮತ್ತೊಂದು ಸಮಸ್ಯೆಯೂ ಬೆಳಕಿಗೆ ಬಂದಿದೆ. ಜಯಮಹಲ್ ರಸ್ತೆಯ ಫನ್ ವರ್ಲ್ಡ್ ಸಮೀಪ ಪ್ರಯಾಣಿಕರೊಬ್ಬರು ಬಸ್ ನಿಲ್ಲಿಸುವಂತೆ ಕೈ ಸನ್ನೆ ಮಾಡಿದರೂ, ಬಸ್ ನಿಲ್ಲಿಸದೆ ತೆರಳಿರುವುದನ್ನು ಸಚಿವರು ಗಮನಿಸಿದ್ದರು.
ಪ್ರಯಾಣಿಕರ ಅನುಕೂಲಕ್ಕಾಗಿ ಸಚಿವರ ನಿರ್ದೇಶನದ ಮೇರೆಗೆ ಫನ್ ವರ್ಲ್ಡ್ ಸಮೀಪ ಅಧಿಕೃತ ಬಸ್ ನಿಲುಗಡೆಯನ್ನು ಜಾರಿಗೆ ತರಲಾಗಿದೆ ಎಂದು ಬಿಎಂಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.



