ಉಡುಪಿ: ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ಹರಿಕಥೆ ಕಾರ್ಯಕ್ರಮದಲ್ಲಿ ಆದಿ ಶಂಕರಾಚಾರ್ಯರ ಕುರಿತು ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ಹರಿಕಥೆ ಕಲಾವಿದೆ ವಿಡಿಯೊ ಮೂಲಕ ಸಾರ್ವಜನಿಕ ಕ್ಷಮೆಯಾಚಿಸಿದ್ದಾರೆ. ಈ ವಿವಾದಕ್ಕೆ ಉಡುಪಿ ಮಠ ಅಥವಾ ಶಿರೂರು ಮಠದ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಯಾರ ಧಾರ್ಮಿಕ ಭಾವನೆಗಳಿಗೂ ಧಕ್ಕೆ ಉಂಟುಮಾಡುವ ಉದ್ದೇಶ ತಮ್ಮದಾಗಿರಲಿಲ್ಲ ಎಂದು ಹೇಳಿದ್ದಾರೆ.
“ಯಾವುದೇ ಮಧ್ವ ಮಠದವರು ಈ ರೀತಿಯ ಹೇಳಿಕೆ ನೀಡುವಂತೆ ನಮಗೆ ಸೂಚಿಸಿಲ್ಲ. ಪುಸ್ತಕದಲ್ಲಿದ್ದ ಮಾಹಿತಿಯನ್ನು ಉಲ್ಲೇಖಿಸಿ ಹೇಳಿದ್ದೇವೆ. ನಮ್ಮ ಮಾತಿನಿಂದ ಬೇರೆ ಮತದವರು ಅಥವಾ ಮಠದವರಿಗೆ ನೋವಾಗಿದ್ದರೆ ಹೃತ್ಪೂರ್ವಕ ಕ್ಷಮೆ ಕೋರುತ್ತೇವೆ” ಎಂದು ಕಲಾವಿದೆ ವಿಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.
ಈ ಕುರಿತು ಶಿರೂರು ಮಠವೂ ಅಧಿಕೃತ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಅಂಕಿತಾ ನಾಯಕ್ ಹಾಗೂ ಗೌರಿ ಪಾಂಡುರಂಗಿ ಅವರಿಗೆ ಭರತನಾಟ್ಯ ಕಾರ್ಯಕ್ರಮ ನಡೆಸಲು ಮಾತ್ರ ಅನುಮತಿ ನೀಡಲಾಗಿತ್ತು. ಕಾರ್ಯಕ್ರಮದ ಮಧ್ಯೆ ‘ಭಕ್ತ ಪ್ರಹ್ಲಾದ’ ಹರಿಕಥೆ ನಡೆಸಲಾಗಿದ್ದು, ಆ ವೇಳೆ ಆದಿ ಶಂಕರಾಚಾರ್ಯರ ಕುರಿತು ಅಕ್ಷೇಪಾರ್ಹ ಹೇಳಿಕೆ ನೀಡಿರುವುದು ಮಠದ ಗಮನಕ್ಕೆ ಬಂದಿದೆ ಎಂದು ತಿಳಿಸಿದೆ.
ಸಂಬಂಧಪಟ್ಟ ಇಬ್ಬರು ಕಲಾವಿದೆಯರಿಗೆ ತಕ್ಷಣ ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ಸೂಚನೆ ನೀಡಲಾಗಿತ್ತು. ಅದರಂತೆ ಅವರು ಕ್ಷಮೆ ಕೋರಿದ್ದು, ನಡೆದ ಘಟನೆಯ ಬಗ್ಗೆ ಶಿರೂರು ಮಠ ವಿಷಾದ ವ್ಯಕ್ತಪಡಿಸಿದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
ರಾಜಾಂಗಣದಲ್ಲಿ ನಡೆದ ಹರಿಕಥೆ ಕಾರ್ಯಕ್ರಮದಲ್ಲಿ ಆಚಾರ್ಯ ಮಾಧ್ವರ ಪ್ರಸಂಗ ವಿವರಿಸುವ ವೇಳೆ ಜಗದ್ಗುರು ಆದಿ ಶಂಕರಾಚಾರ್ಯರ ಕುರಿತು ಅವಹೇಳನಕಾರಿ ಉಲ್ಲೇಖ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಇದೀಗ ಕಲಾವಿದೆಯ ಕ್ಷಮೆಯಾಚನೆ ಹಾಗೂ ಮಠದ ಸ್ಪಷ್ಟನೆಯೊಂದಿಗೆ ಪ್ರಕರಣ ಹೊಸ ತಿರುವು ಪಡೆದಿದೆ.



