ಮೈಸೂರು: ಆಷಾಢ ಮಾಸದ ಮೊದಲ ಶುಕ್ರವಾರದ ಪ್ರಯುಕ್ತ ಚಾಮುಂಡಿ ಬೆಟ್ಟದಲ್ಲಿ ಭಕ್ತಿ, ಸಂಭ್ರಮ ಮತ್ತು ಭದ್ರತಾ ಸಿದ್ಧತೆಗಳು ಗರಿಗೆದರಿವೆ. ಮುಂಜಾನೆಯಿಂದಲೇ ದೇವಿಯ ದರ್ಶನಕ್ಕಾಗಿ ಭಕ್ತರು ಸಾಲುಗಟ್ಟಿ ನಿಂತಿದ್ದು, ಚಾಮುಂಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆಗಳು ವಿಜೃಂಭಣೆಯಿಂದ ನಡೆದಿವೆ.
ನಾಗಲಕ್ಷ್ಮೀ ಅಲಂಕಾರದಲ್ಲಿ ಕಂಗೊಳಿಸಿದ ತಾಯಿ ಚಾಮುಂಡೇಶ್ವರಿ ಹಸಿರು ಸೀರೆಯಲ್ಲಿ ನಾಗಶೇಷ ಶೃಂಗಾರ ತೊಟ್ಟು ಭಕ್ತರಿಗೆ ದಿವ್ಯ ದರ್ಶನ ನೀಡಿದ್ದಾರೆ. ಬೆಳಗಿನ ಜಾವ 3.30ಕ್ಕೆ ಪೂಜಾ ಕೈಂಕರ್ಯ ಆರಂಭಗೊಂಡು, ಅಭಿಷೇಕ, ಕುಂಕುಮಾರ್ಚನೆ ಮತ್ತು ಮಹಾಮಂಗಳಾರತಿ ಬಳಿಕ ದರ್ಶನ ವ್ಯವಸ್ಥೆ ಕಲ್ಪಿಸಲಾಗಿದೆ.
ಭಕ್ತರ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಸಾಮಾನ್ಯ ದರ್ಶನ, ಮೆಟ್ಟಿಲು ಮಾರ್ಗದಿಂದ ಬರುವ ಭಕ್ತರು ಹಾಗೂ ₹2,000 ವಿಶೇಷ ಟಿಕೆಟ್ ಹೊಂದಿರುವವರಿಗೆ ಪ್ರತ್ಯೇಕ ಕ್ಯೂ ಲೈನ್ ವ್ಯವಸ್ಥೆ ಮಾಡಲಾಗಿದೆ. ವಿಶೇಷ ಟಿಕೆಟ್ ಹೊಂದಿರುವವರಿಗೆ ಬೆಳಗ್ಗೆ 5.30ರಿಂದ 10 ಗಂಟೆಯವರೆಗೆ ನೇರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ವಿಐಪಿ ವಾಹನಗಳಿಗೆ ಮಹಿಷಾಸುರ ಪ್ರತಿಮೆಯವರೆಗೆ ಮಾತ್ರ ಪ್ರವೇಶ ನೀಡಲಾಗಿದ್ದು, ಅಲ್ಲಿಂದ ದೇವಾಲಯದವರೆಗೆ ಕಾಲ್ನಡಿಗೆಯಲ್ಲೇ ತೆರಳುವ ವ್ಯವಸ್ಥೆ ಜಾರಿಯಲ್ಲಿದೆ.
ಯಾವುದೇ ಅಹಿತಕರ ಘಟನೆ ನಡೆಯದಂತೆ ಚಾಮುಂಡಿ ಬೆಟ್ಟದಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಡಿಐಜಿ, ನಾಲ್ವರು ಡಿಸಿಪಿಗಳು, 12 ಎಸಿಪಿಗಳು ಸೇರಿದಂತೆ ಒಟ್ಟು 1,588 ಪೊಲೀಸ್ ಮತ್ತು ಭದ್ರತಾ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದು, ಭಕ್ತರ ಸುಗಮ ದರ್ಶನಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.



