ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ವಿಜಯನಗರ ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಬೆಳೆಗಳು ಬಾಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ಅವರು ಮಂಗಳವಾರ ಹಗರಿಬೊಮ್ಮನಹಳ್ಳಿ ತಾಲೂಕಿನ ವಿವಿಧ ಗ್ರಾಮಗಳ ಹೊಲಗಳಿಗೆ ಭೇಟಿ ನೀಡಿ ಬೆಳೆಗಳ ಸ್ಥಿತಿಗತಿಯನ್ನು ಪರಿಶೀಲಿಸಿ, ರೈತರ ಸಮಸ್ಯೆಗಳನ್ನು ಆಲಿಸಿದರು.
ಹೊಸಪೇಟೆಯಿಂದ ಬೆಳಿಗ್ಗೆ ಪ್ರವಾಸ ಆರಂಭಿಸಿದ ಜಿಲ್ಲಾಧಿಕಾರಿಗಳು ನಂದಿಬಂಡಿ, ಹಂಪಾಪಟ್ಟಣ, ರಾರಾಳ ತಾಂಡಾ, ಆನೆಕಲ್ಲು ಹಾಗೂ ಮಾದೂರು ಗ್ರಾಮಗಳ ವ್ಯಾಪ್ತಿಯ ಮೆಕ್ಕೆಜೋಳ, ಹೈಬ್ರಿಡ್ ಜೋಳ, ಶೇಂಗಾ, ಕಬ್ಬು ಸೇರಿದಂತೆ ವಿವಿಧ ಬೆಳೆಗಳನ್ನು ವೀಕ್ಷಿಸಿದರು. ಮಳೆ ಅಭಾವದಿಂದ ಬೆಳೆಗಳು ಒಣಗುತ್ತಿರುವುದು ಹಾಗೂ ಕೆಲ ರೈತರು ಇನ್ನೂ ಬಿತ್ತನೆ ಮಾಡದೆ ಬೀಜ ಮತ್ತು ಗೊಬ್ಬರವನ್ನು ಮನೆಯಲ್ಲೇ ಸಂಗ್ರಹಿಸಿರುವ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಬೆಳೆಗಳ ವಾಸ್ತವ ಸ್ಥಿತಿಯನ್ನು ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸುವ ಉದ್ದೇಶದಿಂದ ಬೆಳೆ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.
ಈ ವೇಳೆ ರೈತರು ತಮ್ಮ ಅಳಲು ತೋಡಿಕೊಂಡರು. ಸಾಲ ಮಾಡಿ ಬೀಜ ಹಾಗೂ ಗೊಬ್ಬರ ಖರೀದಿಸಿದ್ದರೂ ಮಳೆ ಇಲ್ಲದೆ ಬೆಳೆಗಳು ಬಾಡುತ್ತಿವೆ. ಈ ಬಾರಿ ಕೈಗೆ ಬೆಳೆ ಸಿಗುವ ನಿರೀಕ್ಷೆಯೇ ಇಲ್ಲದಂತಾಗಿದೆ. ಸರ್ಕಾರ ತಕ್ಷಣ ಪರಿಹಾರ ಘೋಷಿಸಿ ರೈತರ ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಧಿಕಾರಿಗಳೊಂದಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ರಮ್ ಪಾಷಾ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ, ಉಪ ಕೃಷಿ ನಿರ್ದೇಶಕ ವಾಮದೇವ್, ತಹಶೀಲ್ದಾರ್ ಆರ್. ಕವಿತಾ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪಿ. ವಿಶ್ವನಾಥ್, ಕೃಷಿ ಅಧಿಕಾರಿ ಎಸ್.ವಿ. ಪಾಟೀಲ್, ಅಧಿಕಾರಿಗಳಾದ ಭೋಜ ನಾಯ್ಕ್, ಶಶಿಕುಮಾರ, ರೈತರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
“ಕನ್ನಿಹಳ್ಳಿ ಗ್ರಾಮದಲ್ಲಿ ಈರುಳ್ಳಿ ಬೆಳೆ ಹಾನಿಗೊಳಗಾದ ಜಮೀನುಗಳನ್ನು ಪರಿಶೀಲಿಸಿದ್ದೇನೆ. ಬೆಳೆ ಹಾನಿಯ ಸಮಗ್ರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು.”
– ಕವಿತಾ ಮನ್ನಿಕೇರಿ, ಜಿಲ್ಲಾಧಿಕಾರಿ, ವಿಜಯನಗರ ಜಿಲ್ಲೆ



