ಶ್ರೀನಗರ: ಪಹಲ್ಗಾಮ್ ಉಗ್ರ ದಾಳಿ ಬಳಿಕ ಜಮ್ಮು-ಕಾಶ್ಮೀರದಲ್ಲಿ ಮತ್ತೆ ಉಗ್ರ ಚಟುವಟಿಕೆಗಳು ಹೆಚ್ಚಾಗಿದ್ದು, ಅನಂತನಾಗ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಹುತಾತ್ಮರಾಗಿದ್ದಾರೆ.
ಬುಧವಾರ ಮಧ್ಯಾಹ್ನ ಅನಂತನಾಗ್ ಜಿಲ್ಲೆಯ ಲಾಲ್ ಚೌಕ್ ಪ್ರದೇಶದಲ್ಲಿ ಉಗ್ರರು ಪೊಲೀಸರ ತಂಡದ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಮಧ್ಯಾಹ್ನ ಸುಮಾರು 12.30ರ ವೇಳೆಗೆ ನಡೆದ ಈ ದಾಳಿಯಲ್ಲಿ 35 ವರ್ಷದ ಹೆಡ್ ಕಾನ್ಸ್ಟೇಬಲ್ ಆಶಿಕ್ ಹುಸೇನ್ ಕುರೇಷಿ ಗಂಭೀರವಾಗಿ ಗಾಯಗೊಂಡಿದ್ದರು.
ಅಮರನಾಥ ಯಾತ್ರೆಯ ಭದ್ರತಾ ಕರ್ತವ್ಯಕ್ಕಾಗಿ ನಿಯೋಜಿಸಲಾಗಿದ್ದ ಆಶಿಕ್ ಹುಸೇನ್ ಕುರೇಷಿ ಅವರನ್ನು ತಕ್ಷಣವೇ ಅನಂತನಾಗ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಘಟನೆ ಬಳಿಕ ಭದ್ರತಾ ಪಡೆಗಳು ಕಾರ್ಯಾಚರಣೆ ಆರಂಭಿಸಿದ್ದು, ದಾಳಿ ನಡೆಸಿ ಪರಾರಿಯಾಗಿರುವ ಉಗ್ರರ ಪತ್ತೆಗಾಗಿ ಇಡೀ ಪ್ರದೇಶವನ್ನು ಸುತ್ತುವರಿದಿವೆ. ಶೋಧ ಕಾರ್ಯಾಚರಣೆ ತೀವ್ರಗೊಳಿಸಲಾಗಿದ್ದು, ಉಗ್ರರ ಚಲನವಲನಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಜಮ್ಮು-ಕಾಶ್ಮೀರದಲ್ಲಿ ಅಮರನಾಥ ಯಾತ್ರೆ ಹಿನ್ನೆಲೆಯಲ್ಲಿ ಭದ್ರತಾ ವ್ಯವಸ್ಥೆಗಳನ್ನು ಮತ್ತಷ್ಟು ಬಿಗಿಗೊಳಿಸಲಾಗಿದ್ದು, ಉಗ್ರರ ಚಟುವಟಿಕೆಗಳ ಮೇಲೆ ಭದ್ರತಾ ಪಡೆಗಳು ತೀವ್ರ ನಿಗಾ ಇರಿಸಿವೆ.



