ಶಿವಮೊಗ್ಗ: ಆನ್ಲೈನ್ ಖರೀದಿ ವೇಳೆ ಸೈಬರ್ ವಂಚಕರ ಬಲೆಗೆ ಬಿದ್ದ ಶಿವಮೊಗ್ಗ ನಗರದ ಎಲೆಕ್ಟ್ರಿಶಿಯನ್ವೊಬ್ಬರು ಬರೋಬ್ಬರಿ ₹2.97 ಲಕ್ಷ ಕಳೆದುಕೊಂಡಿರುವ ಘಟನೆ ನಡೆದಿದೆ.
ಶಿವಮೊಗ್ಗ ನಗರದ ಗಾಂಧಿಬಜಾರ್ ನಿವಾಸಿ 38 ವರ್ಷದ ಎಲೆಕ್ಟ್ರಿಶಿಯನ್ ಹಣ ಕಳೆದುಕೊಂಡಿದ್ದಾರೆ. ಜುಲೈ 7ರಂದು ಮೊಬೈಲ್ನಲ್ಲಿ ಇನ್ಸ್ಟಾಗ್ರಾಂ ವೀಕ್ಷಿಸುತ್ತಿದ್ದ ವೇಳೆ ಸೋಪಿನ ಜಾಹೀರಾತು ಕಂಡಿದ್ದು, ಅದನ್ನು ಆನ್ಲೈನ್ ಮೂಲಕ ಆರ್ಡರ್ ಮಾಡಿದ್ದರು.
ಆದರೆ, ಆರ್ಡರ್ ಮಾಡಿದ ಸೋಪು ನಿಗದಿತ ಸಮಯಕ್ಕೆ ತಲುಪದ ಹಿನ್ನೆಲೆಯಲ್ಲಿ ಗೂಗಲ್ನಲ್ಲಿ ದೊರೆತ ಕೊರಿಯರ್ ನಂಬರ್ಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ ವ್ಯಕ್ತಿ ತಾನು ಕೊರಿಯರ್ ಸಿಬ್ಬಂದಿ ಎಂದು ಪರಿಚಯಿಸಿಕೊಂಡು, ಕಳುಹಿಸಿದ ಲಿಂಕ್ ಮೇಲೆ ಕ್ಲಿಕ್ ಮಾಡುವಂತೆ ಸೂಚಿಸಿದ್ದಾನೆ.
ಅದರಂತೆ ಲಿಂಕ್ ತೆರೆದ ಕೆಲವೇ ಕ್ಷಣಗಳಲ್ಲಿ ಎಲೆಕ್ಟ್ರಿಶಿಯನ್ ಅವರ ಮೊಬೈಲ್ಗೆ ಹಲವು ಸಂದೇಶಗಳು ಬಂದಿದ್ದು, ಅನುಮಾನಗೊಂಡ ಅವರು ಲಿಂಕ್ ಅನ್ನು ಡಿಲೀಟ್ ಮಾಡಿದ್ದಾರೆ.
ಬಳಿಕ ಮಗನ ಶಾಲಾ ಶುಲ್ಕ ಪಾವತಿಸಲು ಬ್ಯಾಂಕ್ ಖಾತೆ ಪರಿಶೀಲಿಸಿದಾಗ ಖಾತೆಯಲ್ಲಿ ಹಣ ಇಲ್ಲದಿರುವುದು ಗಮನಕ್ಕೆ ಬಂದಿದೆ. ಬ್ಯಾಂಕ್ಗೆ ತೆರಳಿ ವಿಚಾರಿಸಿದಾಗ, ವಂಚಕರು ಎರಡು ಬಾರಿ ತಲಾ ₹1 ಲಕ್ಷ ಹಾಗೂ ಮತ್ತೊಂದು ಬಾರಿ ₹97 ಸಾವಿರ ಸೇರಿ ಒಟ್ಟು ₹2.97 ಲಕ್ಷ ಹಣವನ್ನು ಖಾತೆಯಿಂದ ವರ್ಗಾಯಿಸಿಕೊಂಡಿರುವುದು ಬೆಳಕಿಗೆ ಬಂದಿದೆ.
ಈ ಕುರಿತು ಎಲೆಕ್ಟ್ರಿಶಿಯನ್ ಅವರು ಶಿವಮೊಗ್ಗ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.



