ವಿಜಯಸಾಕ್ಷಿ ಸುದ್ದಿ, ಗದಗ: ನೀಟ್ (NEET) ಪರೀಕ್ಷೆಯಲ್ಲಿ ಕೇಳಿಬಂದಿರುವ ಅಕ್ರಮಗಳು ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಕರಿನೆರಳು ಬೀರುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಿ ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಕಾಪಾಡಬೇಕು ಎಂದು ಉತ್ತರ ಕರ್ನಾಟಕ ಪದವೀಧರ ಒಕ್ಕೂಟದ ರಾಜ್ಯಾಧ್ಯಕ್ಷ ಎಂ.ಎಸ್. ನಾಗರಕಟ್ಟೆ ಆಗ್ರಹಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ನವದೆಹಲಿಯ ಜಂತರ್ ಮಂತರ್ನಲ್ಲಿ ನಡೆಯುತ್ತಿರುವ ಅಹಿಂಸಾತ್ಮಕ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, ನೀಟ್ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮಗಳ ಕುರಿತು ಕೇಂದ್ರ ಸರ್ಕಾರ ಯಾವುದೇ ವಿಳಂಬ ಮಾಡದೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ವೈದ್ಯರಾಗುವ ಕನಸಿನೊಂದಿಗೆ ವರ್ಷಗಳ ಕಾಲ ಕಠಿಣ ಪರಿಶ್ರಮ ಪಡುವ ಲಕ್ಷಾಂತರ ವಿದ್ಯಾರ್ಥಿಗಳ ಶ್ರಮಕ್ಕೆ ನ್ಯಾಯ ಸಿಗಬೇಕು. ಪರೀಕ್ಷೆಯಲ್ಲಿನ ಭ್ರಷ್ಟಾಚಾರ ಅಥವಾ ಲೋಪಗಳಿಂದ ಅರ್ಹ ವಿದ್ಯಾರ್ಥಿಗಳಿಗೆ ಅನ್ಯಾಯವಾಗಬಾರದು. ಪರೀಕ್ಷೆಯ ಪಾರದರ್ಶಕತೆಯೇ ವಿದ್ಯಾರ್ಥಿಗಳ ಭವಿಷ್ಯದ ಭದ್ರತೆಗೆ ಮೂಲಾಧಾರವಾಗಿದೆ ಎಂದು ಅವರು ಹೇಳಿದ್ದಾರೆ.
ನೀಟ್ ಅಕ್ರಮದಲ್ಲಿ ಭಾಗಿಯಾಗಿರುವ ಹಾಗೂ ನಿರ್ಲಕ್ಷ್ಯ ವಹಿಸಿರುವ ಸಂಬಂಧಪಟ್ಟ ಎಲ್ಲ ಅಧಿಕಾರಿಗಳನ್ನು ತಕ್ಷಣ ಸೇವೆಯಿಂದ ಅಮಾನತುಗೊಳಿಸಬೇಕು. ಪ್ರಕರಣದ ನೈತಿಕ ಹೊಣೆ ಹೊತ್ತು ಸಂಬಂಧಿತ ಸಚಿವರು ರಾಜೀನಾಮೆ ನೀಡಬೇಕು. ಹಗರಣದ ಸಂಪೂರ್ಣ ಸತ್ಯ ಹೊರಬರಲು ಉನ್ನತ ಮಟ್ಟದ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕಷ್ಟಪಟ್ಟು ವ್ಯಾಸಂಗ ಮಾಡಿದ ಯಾವುದೇ ವಿದ್ಯಾರ್ಥಿಗೆ ಅನ್ಯಾಯವಾಗದಂತೆ ಕೇಂದ್ರ ಸರ್ಕಾರ ತಕ್ಷಣವೇ ನ್ಯಾಯಯುತ ಪರಿಹಾರ ಹಾಗೂ ಅಗತ್ಯ ಕ್ರಮಗಳನ್ನು ಪ್ರಕಟಿಸಬೇಕು. ಭ್ರಷ್ಟಾಚಾರ ಮುಕ್ತ ಹಾಗೂ ಪಾರದರ್ಶಕ ಶಿಕ್ಷಣ ವ್ಯವಸ್ಥೆ ನಿರ್ಮಾಣ ಇಂದಿನ ತುರ್ತು ಅಗತ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಅಹಿಂಸಾತ್ಮಕ ಹೋರಾಟಗಳಿಗೆ ವಿಶೇಷ ಸ್ಥಾನವಿದ್ದು, ಜಂತರ್ ಮಂತರ್ನಲ್ಲಿ ನಡೆಯುತ್ತಿರುವ ಸತ್ಯಾಗ್ರಹಕ್ಕೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿ ವಿದ್ಯಾರ್ಥಿಗಳ ಆತಂಕ ನಿವಾರಿಸಬೇಕು ಎಂದು ಎಂ.ಎಸ್. ನಾಗರಕಟ್ಟೆ ಆಗ್ರಹಿಸಿದ್ದಾರೆ.
“ನೀಟ್ ಅಕ್ರಮಕ್ಕೆ ಕಾರಣರಾದ ಎಲ್ಲ ಅಧಿಕಾರಿಗಳನ್ನು ತಕ್ಷಣ ಅಮಾನತುಗೊಳಿಸಿ, ಸಂಬಂಧಿತ ಸಚಿವರ ರಾಜೀನಾಮೆ ಪಡೆಯಬೇಕು. ಕಷ್ಟಪಟ್ಟು ಓದಿದ ವಿದ್ಯಾರ್ಥಿಗಳಿಗೆ ಯಾವುದೇ ಅನ್ಯಾಯವಾಗದಂತೆ ಕೇಂದ್ರ ಸರ್ಕಾರ ನ್ಯಾಯ ಒದಗಿಸಬೇಕು.”
– ಎಂ.ಎಸ್. ನಾಗರಕಟ್ಟೆ , ರಾಜ್ಯಾಧ್ಯಕ್ಷರು, ಉತ್ತರ ಕರ್ನಾಟಕ ಪದವೀಧರ ಒಕ್ಕೂಟ



