ವಿಜಯಸಾಕ್ಷಿ ಸುದ್ದಿ, ಗದಗ: ಶಾಲಾ ಬಿಸಿಯೂಟ ಯೋಜನೆಯಡಿ ನೀಡಲಾಗುತ್ತಿರುವ ಒಂದು ಮೊಟ್ಟೆಗೆ ₹6 ಅನುದಾನ ಪ್ರಸ್ತುತ ಮಾರುಕಟ್ಟೆ ದರಕ್ಕೆ ಹೊಂದಿಕೆಯಾಗುತ್ತಿಲ್ಲ. ಮೊಟ್ಟೆ ಖರೀದಿ, ಕುದಿಸುವುದು, ಸುಲಿಯುವುದು ಸೇರಿದಂತೆ ಹೆಚ್ಚುತ್ತಿರುವ ವೆಚ್ಚದಿಂದ ಶಾಲೆಗಳ ಮುಖ್ಯೋಪಾಧ್ಯಾಯರೇ ಆರ್ಥಿಕ ಹೊರೆ ಹೊರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಅನುದಾನವನ್ನು ತಕ್ಷಣ ಹೆಚ್ಚಿಸಬೇಕು ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಆಗ್ರಹಿಸಿದೆ.
ಈ ಕುರಿತು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗದಗ ಗ್ರಾಮೀಣ ವಲಯ ಘಟಕವು ಜಿಲ್ಲಾಧ್ಯಕ್ಷ ವಿ.ಎಂ. ಹಿರೇಮಠ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿತು.
ಮನವಿಯಲ್ಲಿ, ಮೊಟ್ಟೆ ಹಾಗೂ ತರಕಾರಿ ದರಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಿಸಿಯೂಟ ಯೋಜನೆ ಅನುಷ್ಠಾನದಲ್ಲಿ ಶಾಲೆಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ ಎಂದು ತಿಳಿಸಲಾಗಿದೆ.
ಇದರೊಂದಿಗೆ SATS ತಾಂತ್ರಿಕ ಸಮಸ್ಯೆಯಿಂದ ವಿದ್ಯಾರ್ಥಿಗಳ ಮಾಹಿತಿ ಸಿಂಕ್ ಆಗದಿರುವುದನ್ನು ಸರಿಪಡಿಸಬೇಕು. ಎಲ್‌ಕೆಜಿ ಹಾಗೂ ಯುಕೆಜಿ ಮಕ್ಕಳ ಹಾಜರಾತಿ ದಾಖಲಾಗದ ಕಾರಣ ಅನುದಾನ ನಿರ್ವಹಣೆಯಲ್ಲಿ ಉಂಟಾಗುತ್ತಿರುವ ತೊಂದರೆ ನಿವಾರಿಸಬೇಕು. ಅಕ್ಷರ ದಾಸೋಹ ಯೋಜನೆಗೆ ಅಗತ್ಯ ದಾಸ್ತಾನುಗಳನ್ನು ಕಾಲಮಿತಿಯಲ್ಲಿ ಪೂರೈಸಬೇಕು ಎಂದು ಒತ್ತಾಯಿಸಲಾಗಿದೆ.
ಕಳೆದ ಬೇಸಿಗೆ ರಜೆಯಲ್ಲಿ ಭಾರತ ಜನಗಣತಿ ಸಮೀಕ್ಷೆ ಕಾರ್ಯದಲ್ಲಿ ಪಾಲ್ಗೊಂಡ ಶಿಕ್ಷಕರಿಗೆ ಬಾಕಿ ಇರುವ ಗೌರವಧನವನ್ನು ತಕ್ಷಣ ಬಿಡುಗಡೆ ಮಾಡಬೇಕು. ಗಳಿಕೆ ರಜೆ ಜಮಾ ಮಾಡುವ ಕುರಿತು ಸಂಬಂಧಿಸಿದ ಇಲಾಖೆಗೆ ಅಗತ್ಯ ನಿರ್ದೇಶನ ನೀಡುವಂತೆಯೂ ಮನವಿಯಲ್ಲಿ ಆಗ್ರಹಿಸಲಾಗಿದೆ.
ಮನವಿಯನ್ನು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಡಿಡಿಪಿಐ ಆರ್.ಎಸ್. ಬುರಡಿ, ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ಸರಸ್ವತಿ ಕನವಳ್ಳಿ ಹಾಗೂ ಪಿಎಂ ಪೋಷಣಾ ಯೋಜನೆ ಸಹಾಯಕ ನಿರ್ದೇಶಕ ಶಂಕರ ಹಡಗಲಿ ಅವರಿಗೆ ಸಲ್ಲಿಸಲಾಯಿತು. ಸಂಬಂಧಪಟ್ಟ ಇಲಾಖೆಯ ಗಮನ ಸೆಳೆದು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.
“ಪ್ರಸ್ತುತ ನೀಡುತ್ತಿರುವ ₹6 ಅನುದಾನದಲ್ಲಿ ಮೊಟ್ಟೆ ಖರೀದಿ, ಕುದಿಸುವುದು ಮತ್ತು ವಿತರಣೆ ವೆಚ್ಚ ಭರಿಸುವುದು ಸಾಧ್ಯವಾಗುತ್ತಿಲ್ಲ. ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಅನುದಾನವನ್ನು ಸರ್ಕಾರ ಹೆಚ್ಚಿಸಬೇಕು.”
— ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ



