ಗದಗ: ದೇವಿಯ ಮೈಮೇಲಿದ್ದ ಚಿನ್ನ-ಬೆಳ್ಳಿ ಆಭರಣಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ನಡೆಸಿದ್ದ ಅಂತರ್‌ಜಿಲ್ಲಾ ಕಳ್ಳನನ್ನು ಬೆಟಗೇರಿ ಬಡಾವಣೆ ಪೊಲೀಸರು ಬಂಧಿಸಿದ್ದು, ಕಳುವಾಗಿದ್ದ ₹1.25 ಲಕ್ಷ ಮೌಲ್ಯದ ಚಿನ್ನ-ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ಹಾತಲಗೇರಿ ನಾಕಾ ಸಮೀಪದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಜೂನ್ 19ರಂದು ನಡೆದಿದ್ದ ಕಳ್ಳತನ ಪ್ರಕರಣವನ್ನು ಭೇದಿಸಿರುವ ಪೊಲೀಸರು, ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬಲ್ಲಾವಳ್ಳಿ ಗ್ರಾಮದ ಪೃಥ್ವಿರಾಜ ಬಿಎ ತಂದೆ ಅಪ್ಪಾಜಿಗೌಡ (31) ಎಂಬ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿ ದೇವಿಗೆ ಅಲಂಕರಿಸಲಾಗಿದ್ದ 100 ಗ್ರಾಂ ಬೆಳ್ಳಿಯ ಕಿರೀಟ, 20 ಗ್ರಾಂ ಬೆಳ್ಳಿಯ ಕೈ ಹಾಗೂ ಎರಡು ಬಂಗಾರದ ತಾಳಿ ಪದಕಗಳನ್ನು ಕಳವು ಮಾಡಿ ಪರಾರಿಯಾಗಿದ್ದ. ಈ ಸಂಬಂಧ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 53/2026ರಡಿ ಪ್ರಕರಣ ದಾಖಲಾಗಿತ್ತು.
ಮಂಡ್ಯದವರೆಗೂ ಬೆನ್ನತ್ತಿದ ಪೊಲೀಸರು
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ ಅವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಹಾಂತೇಶ ಸಜ್ಜನ ಅವರ ಮೇಲ್ವಿಚಾರಣೆ ಹಾಗೂ ಬೆಟಗೇರಿ ವೃತ್ತದ ಸಿಪಿಐ ಧೀರಜ್ ಎ. ಸಿಂಧೆ ನೇತೃತ್ವದ ವಿಶೇಷ ತಂಡ ಕಾರ್ಯಾಚರಣೆ ನಡೆಸಿತು. ತಾಂತ್ರಿಕ ಮಾಹಿತಿ ಹಾಗೂ ಗುಪ್ತಚರ ಜಾಲದ ನೆರವಿನಿಂದ ಮಂಡ್ಯ ಜಿಲ್ಲೆಯವರೆಗೂ ಬೆನ್ನುಹತ್ತಿದ ಪೊಲೀಸರು ಕೊನೆಗೂ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದರು.
ವಿಚಾರಣೆ ವೇಳೆ ದೇವಸ್ಥಾನ ಕಳ್ಳತನ ನಡೆಸಿರುವುದನ್ನು ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯಿಂದ 100 ಗ್ರಾಂ ಬೆಳ್ಳಿಯ ಕಿರೀಟ, 20 ಗ್ರಾಂ ಬೆಳ್ಳಿಯ ಕೈ ಹಾಗೂ ಎರಡು ಬಂಗಾರದ ತಾಳಿ ಪದಕಗಳು ಸೇರಿ ₹1.25 ಲಕ್ಷ ಮೌಲ್ಯದ ಚಿನ್ನ-ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಾರ್ಯಾಚರಣೆಯಲ್ಲಿ ಪಿಎಸ್‌ಐ ಚನ್ನಯ್ಯ ದೇವೂರ (ಪ್ರಭಾರ), ಎಎಸ್‌ಐಗಳಾದ ಪಿ.ಎಫ್. ಹುಡೇದ, ಐ.ಎಸ್. ಲಮಾಣಿ, ಸಿಬ್ಬಂದಿ ಸಂತೋಷ ಡೋಣಿ, ಪ್ರವೀಣ ಕಲ್ಲೂರ, ಅಶೋಕ ಗದಗ, ಪಿ.ಎಚ್. ದೊಡ್ಡಮನಿ, ತಾಂತ್ರಿಕ ವಿಭಾಗದ ಎಆರ್‌ಎಸ್‌ಐ ಗುರುರಾಜ ಬೂದಿಹಾಳ ಹಾಗೂ ಸಂಜು ಕೊರಡೂರ ಭಾಗವಹಿಸಿದ್ದರು. ಪ್ರಕರಣವನ್ನು ಭೇದಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ರೋಹನ್ ಜಗದೀಶ್ ಅಭಿನಂದಿಸಿದ್ದಾರೆ.



