ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಜಗತ್ತಿನ ಆಗುಹೋಗುಗಳ ಮಾಹಿತಿ ನೀಡುವುದರ ಜೊತೆಗೆ ಸಮಾಜದ ಎಲ್ಲ ಕ್ಷೇತ್ರಗಳ ಪ್ರತಿಬಿಂಬವಾಗಿ ಕಾರ್ಯನಿರ್ವಹಿಸುವ ಪತ್ರಿಕಾ ರಂಗಕ್ಕೆ ಸಮಾಜ ಇನ್ನಷ್ಟು ಶಕ್ತಿ ತುಂಬಬೇಕು ಎಂದು ಹೂವಿನಶಿಗ್ಲಿಯ ಶ್ರೀ ಚನ್ನವೀರ ಮಹಾಸ್ವಾಮೀಜಿ ಹೇಳಿದರು.
ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಪತ್ರಕರ್ತರ ಸಂಘ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, “ಸತ್ಯದ ಹುಡುಕಾಟವೇ ಪತ್ರಿಕೋದ್ಯಮದ ಧರ್ಮ. ನೊಂದ ಜನರ ಧ್ವನಿಯಾಗಿರುವ ಪತ್ರಿಕೆಗಳು ಪ್ರಜಾಪ್ರಭುತ್ವವನ್ನು ಬಲಪಡಿಸುವ ಮಹತ್ತರ ಜವಾಬ್ದಾರಿಯನ್ನು ನಿರ್ವಹಿಸುತ್ತಿವೆ” ಎಂದರು.
ವಿನಾಕಾರಣ ಅನೇಕ ವಿಷಯಗಳಿಗೆ ಹಣ ಖರ್ಚು ಮಾಡುವ ಜನರು ಜ್ಞಾನ ವೃದ್ಧಿಗೆ ದಿನಪತ್ರಿಕೆಗಳನ್ನು ಖರೀದಿಸಿ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಪತ್ರಿಕಾ ದಿನಾಚರಣೆ ಅಂಗವಾಗಿ ರುದ್ರಭೂಮಿಯನ್ನು ಸ್ವಚ್ಛಗೊಳಿಸಿರುವ ಪತ್ರಕರ್ತರ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪಿಎಸ್ಐ ನಾಗರಾಜ ಗಡಾದ, ನ್ಯಾಯಾಂಗ, ಕಾರ್ಯಾಂಗ ಹಾಗೂ ಶಾಸಕಾಂಗಗಳು ತಮ್ಮ ಜವಾಬ್ದಾರಿಯಿಂದ ಹಿಂದೆ ಸರಿದಾಗ ಸಮಾಜವನ್ನು ಎಚ್ಚರಿಸುವ ಕೆಲಸವನ್ನು ಪತ್ರಿಕಾ ರಂಗ ಮಾಡುತ್ತದೆ. ವಿದ್ಯಾರ್ಥಿಗಳಲ್ಲಿ ದಿನಪತ್ರಿಕೆ ಓದುವ ಹವ್ಯಾಸ ಬೆಳೆಸುವುದು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅತ್ಯಗತ್ಯ ಎಂದು ಹೇಳಿದರು.
ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಶರಣು ದೊಡ್ಡೂರ ಹಾಗೂ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಆನಂದಯ್ಯ ವಿರಕ್ತಮಠ ಮಾತನಾಡಿ, ಪತ್ರಕರ್ತರು ಕೇವಲ ಸುದ್ದಿ ನೀಡುವವರಲ್ಲ, ಸಮಾಜದ ಬದಲಾವಣೆಯ ರೂವಾರಿಗಳಾಗಿದ್ದಾರೆ.
ವಿದ್ಯಾರ್ಥಿಗಳು ಶಾಲಾ ಹಂತದಲ್ಲೇ ಪತ್ರಿಕೆ ಓದುವ ಅಭ್ಯಾಸ ಬೆಳೆಸಿಕೊಂಡರೆ ವಿವಿಧ ಕ್ಷೇತ್ರಗಳ ಸಮಗ್ರ ಜ್ಞಾನ ದೊರೆಯುತ್ತದೆ ಎಂದು ತಿಳಿಸಿದರು.
ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಅಶೋಕ ಸೊರಟೂರ ಅಧ್ಯಕ್ಷತೆ ವಹಿಸಿದ್ದರು. ಗುರುರಾಜ ಪಾಟೀಲ ಕುಲಕರ್ಣಿ, ಮಲ್ಲು ಕಳಸಾಪುರ, ಸುರೇಶ ಕಡ್ಲಿಮಟ್ಟಿ, ಬಿ.ಸಿ. ಪಟ್ಟೇದ ಸೇರಿದಂತೆ ಹಲವು ಗಣ್ಯರು, ಪತ್ರಕರ್ತರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
“ಸತ್ಯದ ಹುಡುಕಾಟವೇ ಪತ್ರಿಕೋದ್ಯಮದ ಧರ್ಮ. ಸಮಾಜದ ಧ್ವನಿಯಾಗಿರುವ ಪತ್ರಿಕೆಗಳನ್ನು ಓದುವ ಸಂಸ್ಕೃತಿ ಇನ್ನಷ್ಟು ಬೆಳೆಯಬೇಕು.”
– ಶ್ರೀ ಚನ್ನವೀರ ಮಹಾಸ್ವಾಮೀಜಿ, ಹೂವಿನಶಿಗ್ಲಿ



