ವಿಜಯಸಾಕ್ಷಿ ಸುದ್ದಿ, ಗದಗ: ಗದಗ–ಹರಪನಹಳ್ಳಿ ರೈಲ್ವೆ ಮಾರ್ಗ ಕಾಮಗಾರಿ ವಿಳಂಬವನ್ನು ಖಂಡಿಸಿ ಜುಲೈ 31ರಂದು ಬೆಳಿಗ್ಗೆ 11 ಗಂಟೆಯಿಂದ ನಗರದ ರೈಲ್ವೆ ನಿಲ್ದಾಣದ ಎದುರು ಜನಕಲ್ಯಾಣ ಯಾತ್ರೆ, ಅಸಹಕಾರ ಚಳವಳಿ ಹಾಗೂ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಸಾರ್ವಜನಿಕ ಹೋರಾಟ ವೇದಿಕೆ ಸಂಚಾಲಕ ಬಸವರಾಜ ನವಲಗುಂದ ತಿಳಿಸಿದರು.
ಸೋಮವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗದಗ–ಹರಪನಹಳ್ಳಿ ರೈಲು ಮಾರ್ಗ ರಚನೆಯ ಜಂಟಿ ಕ್ರಿಯಾ ಸಮಿತಿ ಹಾಗೂ ಅದ್ವಿಕ್ ವಿವಿಧೋದ್ದೇಶಗಳ ಅಭಿವೃದ್ಧಿ ಸಂಘದ ಸಹಯೋಗದಲ್ಲಿ ಪ್ರತಿಭಟನೆ ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಗದಗ–ಮುಂಡರಗಿ–ಹೂವಿನಹಡಗಲಿ–ಹರಪನಹಳ್ಳಿ ರೈಲು ಮಾರ್ಗ ಯೋಜನೆ ಮಂಜೂರಾಗಿ 12 ವರ್ಷಗಳು ಕಳೆದರೂ ಕಾಮಗಾರಿ ಆರಂಭವಾಗಿಲ್ಲ. ಯೋಜನೆ ಜಾರಿಗೆ ಆಗ್ರಹಿಸಿ ನವದೆಹಲಿಯ ಜಂತರ್ಮಂತರ್ ಸೇರಿದಂತೆ ಗದಗದಲ್ಲಿಯೂ ಹಲವು ಬಾರಿ ಪ್ರತಿಭಟನೆ ನಡೆಸಲಾಗಿದೆ. ಇದರ ಪರಿಣಾಮವಾಗಿ 2015ರಲ್ಲಿ 94 ಕಿಲೋಮೀಟರ್ವರೆಗೆ ಸರ್ವೆ ನಡೆಸಲಾಗಿತ್ತು ಎಂದು ಹೇಳಿದರು.
ರೈಲ್ವೆ ಮಂಡಳಿಗೆ ಈ ಯೋಜನೆಯಿಂದ ಶೇ.78ರಷ್ಟು ನಷ್ಟವಾಗುತ್ತದೆ ಎಂಬ ಅವೈಜ್ಞಾನಿಕ ವರದಿ ಸಲ್ಲಿಕೆಯಾಗಿದ್ದರಿಂದ ಯೋಜನೆ ಸ್ಥಗಿತಗೊಂಡಿದೆ ಎಂದು ಆರೋಪಿಸಿದ ಅವರು, ನಿರಂತರ ಹೋರಾಟದ ಫಲವಾಗಿ 2016–17ರ ಕೇಂದ್ರ ಬಜೆಟ್ನಲ್ಲಿ ಮರುಸರ್ವೆಗೆ ₹9 ಲಕ್ಷ ಅನುದಾನ ಮಂಜೂರಾದರೂ, ರೈಲ್ವೆ ಮಂಡಳಿ ಇನ್ನೂ ನಿರ್ಲಕ್ಷ್ಯ ಧೋರಣೆ ಮುಂದುವರಿಸಿದೆ ಎಂದು ದೂರಿದರು.
ಪತ್ರಿಕಾಗೋಷ್ಠಿಯಲ್ಲಿ ಗದಗ–ಹರಪನಹಳ್ಳಿ ರೈಲು ಮಾರ್ಗ ರಚನೆಯ ಜಂಟಿ ಕ್ರಿಯಾ ಸಮಿತಿಯ ಮುಂಡರಗಿ ತಾಲೂಕು ಘಟಕದ ಅಧ್ಯಕ್ಷ ಧ್ರುವಕುಮಾರ ಹೂಗಾರ, ವಿಜಯಕುಮಾರ, ಉಪಾಧ್ಯಕ್ಷ ರವಿಗೌಡ ಪಾಟೀಲ, ಸಾರ್ವಜನಿಕ ಹೋರಾಟ ವೇದಿಕೆ ಸದಸ್ಯ ಬಸಪ್ಪ ವಡ್ಡರ ಹಾಗೂ ರಿಯಾಜ್ ಹೊಸಪೇಟೆ ಉಪಸ್ಥಿತರಿದ್ದರು.



