ವಿಜಯಸಾಕ್ಷಿ ಸುದ್ದಿ, ಗದಗ: ಶಿರಹಟ್ಟಿ ಪೊಲೀಸ್ ಠಾಣೆಯ ಪಿಎಸ್ಐ ಈರಪ್ಪ ರಿತ್ತಿ ಅವರು ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿರುವ ಆರೋಪದ ಹಿನ್ನೆಲೆಯಲ್ಲಿ ಅವರನ್ನು ಅಮಾನತುಗೊಳಿಸಿ ಸೂಕ್ತ ಇಲಾಖಾ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ದಲಿತ ಮಿತ್ರ ಮಂಡಳಿ ಪದಾಧಿಕಾರಿಗಳು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ದಲಿತ ಮಿತ್ರ ಮಂಡಳಿಯ ಅಧ್ಯಕ್ಷ ಕುಮಾರ ನಡಗೇರಿ, ಕನಕವಾಡ ಗ್ರಾಮದ ದಾದೇಗೌಡ ಪಾಟೀಲ ಅವರನ್ನು ಜುಲೈ 23ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆದೊಯ್ಯುವ ವೇಳೆ ಪಿಎಸ್ಐ ಈರಪ್ಪ ರಿತ್ತಿ ಹಾಗೂ ಇತರರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದರು.
ಈ ಘಟನೆಯಲ್ಲಿ ದಾದೇಗೌಡ ಪಾಟೀಲ ಅವರ ಎದೆ ಹಾಗೂ ತುಟಿಗೆ ಗಾಯಗಳಾಗಿದ್ದು, ಲಕ್ಷ್ಮೇಶ್ವರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಎಲ್ಸಿ ದಾಖಲಾಗಿರುವುದಾಗಿ ಅವರು ತಿಳಿಸಿದರು.
ಪಿಎಸ್ಐ ಈರಪ್ಪ ರಿತ್ತಿ ವಿರುದ್ಧ ಈ ಹಿಂದೆಯೂ ಸಾರ್ವಜನಿಕರ ಮೇಲೆ ಹಲ್ಲೆ ನಡೆಸಿದ ಆರೋಪಗಳು ಕೇಳಿ ಬಂದಿವೆ ಎಂದು ಆರೋಪಿಸಿದ್ದಾರೆ.
ಇಂತಹ ಆರೋಪಗಳ ಹಿನ್ನೆಲೆಯಲ್ಲಿ ಪಿಎಸ್ಐ ಈರಪ್ಪ ರಿತ್ತಿ ಅವರನ್ನು ತಕ್ಷಣ ಅಮಾನತುಗೊಳಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಈ ಕುರಿತು 10 ದಿನಗಳೊಳಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಧರಣಿ, ಅಹೋರಾತ್ರಿ ಸತ್ಯಾಗ್ರಹ, ಸರದಿ ಸತ್ಯಾಗ್ರಹ ಹಾಗೂ ಅಮರಣಾಂತಿಕ ಸತ್ಯಾಗ್ರಹ ಸೇರಿದಂತೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ವಿಷಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಚರ್ಚಿಸಿ ಕಾನೂನುಬದ್ಧವಾಗಿ ಪರಿಶೀಲಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ದಲಿತ ಮಿತ್ರ ಮಂಡಳಿಯ ಉಪಾಧ್ಯಕ್ಷ ವೆಂಕಟೇಶ ದೊಡ್ಡಮನಿ, ಗೌರವಾಧ್ಯಕ್ಷ ಪಿ.ಎಸ್. ಕಾಳೆ, ಹಿರಿಯ ಮುಖಂಡ ಹುಲಿಗೆಪ್ಪ ವಾಲ್ಮೀಕಿ, ಸದಾನಂದಸಿಂಗ್ ಗುರ್ಲಹೊಸೂರ, ಮಂಜುನಾಥ ಯಮುನಾಳ, ಶಿವು ಬಂಗಾರಿ, ಆನಂದ ಅರಿಕೇರಿ, ಸಂತೋಷ ರಸಾಳಕರ, ಸ್ವರೂಪ ಉಳ್ಳಿಕಾಶಿ, ರಮೇಶ ವಾಲ್ಮೀಕಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.



