HomeArt and Literatureರಾಗ, ತಾಳ, ಲಯದಂತೆ ಮನಸ್ಸು...

ರಾಗ, ತಾಳ, ಲಯದಂತೆ ಮನಸ್ಸು…

ಸಂಗೀತಕ್ಕೆ ಮನಸ್ಸೋಲದವರೇ ಇಲ್ಲ. ಮನುಷ್ಯನ ಭಾವಗಳನ್ನು ಬೆಸೆಯುವ ಮಾಂತ್ರಿಕ ಶಕ್ತಿಯೇ ಸಂಗೀತ. ರಾಗ, ತಾಳ, ಲಯ ಸಂಗೀತದ ಆಧಾರಸ್ತಂಭಗಳು. ಸ್ವರಗಳ ಶಿಸ್ತುಬದ್ಧತೆಯೇ ರಾಗವಾದರೆ, ಸಂಗೀತಕ್ಕೆ ಹೃದಯ ಬಡಿತದಂತೆ ತಾಳ. ಇನ್ನು ಲಯವೆಂದರೆ ಭಾವಾನುಸಂಧಾನದ ಬೆಸುಗೆಯಂತೆ. ಭಾವನೆಗಳ ವೇಗವನ್ನು ಸರಿದೂಗಿಸುವ ಲಯ ಸಂಗೀತದ ಸ್ವಾರಸ್ಯಕ್ಕೆ ಮೆರಗು ನೀಡುತ್ತದೆ.

ಮನಸ್ಸೂ ಸಹ ಒಂದು ರೀತಿಯಲ್ಲಿ ಸಂಗೀತದ ರಾಗ, ತಾಳ, ಲಯದಂತೆಯೇ. “ಮನವೇ ಮನುಷ್ಯನ ಮಹಾನ್ ಮಿತ್ರ. ಕೆಲವು ಸಂದರ್ಭಗಳಲ್ಲಿ ಅದೇ ಮನಸ್ಸು ಅವನ ದೊಡ್ಡ ಶತ್ರುವೂ ಆಗಬಹುದು.” ರಾಗ, ತಾಳ, ಲಯ ತಪ್ಪಿದರೆ ಸಂಗೀತ ಹೇಗೆ ತನ್ನ ಇಂಪನ್ನು ಕಳೆದುಕೊಳ್ಳುತ್ತದೆಯೋ, ಹಾಗೆಯೇ ಮನಸ್ಸು ತನ್ನದೇ ಆದ ಇತಿಮಿತಿಗಳನ್ನು ಮೀರಿ ಆಸೆ, ಆಮಿಷಗಳ ದಾಸನಾದರೆ ಮನುಷ್ಯನ ಬದುಕನ್ನೇ ವಿಚಲಿತಗೊಳಿಸುತ್ತದೆ. ಪ್ರಸ್ತುತ ಮಾನವನ ಬದುಕಿನ ಸಂಗತಿಗಳನ್ನು ಗಮನಿಸಿದಾಗ, ಸುತ್ತಲಿನ ಸಮಾಜದಲ್ಲಿ ನಡೆಯುತ್ತಿರುವ ಆತಂಕಕಾರಿ ಘಟನೆಗಳನ್ನು ನೆನಪಿಸಿಕೊಂಡಾಗ, ಹಲವು ವಿಕೃತಿಗಳಿಗೆ ಮನುಷ್ಯನ ಮನಸ್ಥಿತಿಯೇ ಕಾರಣ ಎಂಬುದು ಸತ್ಯ.

ಇಂದು ಅವಸರದ ಬದುಕನ್ನು ಅರಸುತ್ತ ಹೊರಟಿರುವ ಮಾನವ ತನ್ನ ಅವನತಿಗೆ ತಾನೇ ಕಾರಣವಾಗುತ್ತಿರುವುದು ಬೂದಿ ಮುಚ್ಚಿದ ಕೆಂಡದಂತಿದೆ. ಜೀವನದ ಯಶಸ್ಸು, ವೈಫಲ್ಯ, ಸಂತೋಷ, ದುಃಖ, ಪ್ರೀತಿ, ದ್ವೇಷ, ಶಾಂತಿ, ಅಶಾಂತಿ ಹೀಗೆ ಎಲ್ಲ ರೀತಿಯ ಸಂವೇಗಗಳು ಮನುಷ್ಯನನ್ನು ಅನೇಕ ತಲ್ಲಣಗಳಿಗೆ ಗುರಿಮಾಡಿವೆ. ಮನುಷ್ಯ ಇಂದು ಏನೇ ಸಾಧಿಸಿದ್ದರೂ, ನೈಪುಣ್ಯ, ತಾಂತ್ರಿಕತೆ ಮತ್ತು ಕ್ರಿಯಾಶೀಲತೆ ಹೊಂದಿದ್ದರೂ, ಇವೆಲ್ಲವೂ ಮನಸ್ಸಿನ ಸ್ಥಿತಿಯನ್ನು ಅವಲಂಬಿಸಿವೆ.

ಸರಿಯಾದ ರೀತಿಯಲ್ಲಿ ಬಾಹ್ಯ ಪ್ರಪಂಚದ ಸಂವೇಗಗಳನ್ನು ಗ್ರಹಿಸಬೇಕಾದರೆ ಪಂಚೇಂದ್ರಿಯಗಳ ಸರಿಯಾದ ಕಾರ್ಯನಿರ್ವಹಣೆ ಅವಶ್ಯ. ಪಂಚೇಂದ್ರಿಯಗಳಲ್ಲಿ ತೊಡಕುಗಳಿದ್ದರೆ ಸಂವೇಗಗಳಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಸಂದರ್ಭಗಳ ವ್ಯತ್ಯಾಸದಿಂದ ಮನುಷ್ಯ ಪಡೆಯುವ ಅನುಭವಗಳು ಸಕಾರಾತ್ಮಕವಾಗಿರಬಹುದು ಅಥವಾ ನಕಾರಾತ್ಮಕವೂ ಆಗಬಹುದು. ಅದು ಮಾನವ ಅಸ್ತಿತ್ವದ ಗಾಢ ಅನುಭವವಾಗಿದೆ.

ಮನಸ್ಸು ಅಗೋಚರವಾದುದು. ಅದಕ್ಕೆ ನಿರ್ದಿಷ್ಟ ಆಕಾರ, ಗಾತ್ರ ಅಥವಾ ತೂಕವಿಲ್ಲ. ಆದರೆ ಮನುಷ್ಯನ ಎಲ್ಲಾ ಕ್ರಿಯೆಗಳಿಗೆ ಅದು ಮುನ್ನುಡಿಯಾಗಿದೆ. ಮನಸ್ಸು ಗೋಚರಿಸುವ ಅಂಗವಲ್ಲ. ಆದರೂ ಅದರ ಪ್ರಭಾವ ವಿಶ್ವದ ಯಾವುದೇ ಶಕ್ತಿಗಿಂತ ಕಡಿಮೆಯಿಲ್ಲ.

ಅದು ಕ್ಷಣಾರ್ಧದಲ್ಲಿ ಸಾವಿರಾರು ನೆನಪುಗಳನ್ನು ಮೆಲುಕು ಹಾಕುತ್ತದೆ. ಭವಿಷ್ಯದ ಕನಸುಗಳನ್ನು ಕಟ್ಟುತ್ತದೆ. ಭೂತಕಾಲದ ನೋವನ್ನು ಮತ್ತೆ ಅನುಭವಿಸುತ್ತದೆ. ಒಂದೇ ಕ್ಷಣದಲ್ಲಿ ಮನುಷ್ಯನನ್ನು ಶಿಖರಕ್ಕೇರಿಸಬಲ್ಲದು; ಮತ್ತೊಂದು ಕ್ಷಣದಲ್ಲಿ ನಿರಾಶೆಯ ಕಂದಕಕ್ಕೂ ತಳ್ಳಬಲ್ಲದು. ಮನುಷ್ಯನ ಪ್ರಜ್ಞಾವಂತಿಕೆ ಮನಸ್ಸನ್ನು ನಿಗ್ರಹಿಸಬಲ್ಲದು ಹಾಗೂ ನಿಯಂತ್ರಿಸಬಲ್ಲದು.

ಇಂದಿನ ತಂತ್ರಜ್ಞಾನ ಯುಗದಲ್ಲಿ ಮನಸ್ಸಿನ ಪಾತ್ರ ಇನ್ನಷ್ಟು ಸಂಕೀರ್ಣವಾಗಿದೆ. ಅವಶ್ಯಕತೆಗಾಗಿ ಆರಂಭವಾದ ತಾಂತ್ರಿಕ ಬಳಕೆ ಇಂದು ಮನುಷ್ಯನನ್ನೇ ಮಾಯಾಬಜಾರ್‌ನಲ್ಲಿ ಸುತ್ತಿಸುತ್ತಿದೆ. ಸಂವಹನಕ್ಕಾಗಿ ಬಳಸುವ ಮೊಬೈಲ್, ಅವಶ್ಯಕತೆಯನ್ನು ಮೀರಿ ನಮ್ಮನ್ನೇ ಆಳುತ್ತಿದೆ. ಅಂದರೆ, ನಾವೇ ಅದರ ವ್ಯಾಮೋಹಕ್ಕೆ ಬಲಿಯಾಗಿ ನಮ್ಮತನವನ್ನೇ ಮರೆಯುತ್ತಿದ್ದೇವೆ.

ಬದುಕಿನ ಚಿಕ್ಕಪುಟ್ಟ ಸಂಗತಿಗಳು ಜಗಜ್ಜಾಹಿರವಾಗುತ್ತಿವೆ. ಯಾವುದು ಅಲ್ಲ ಅದು ಹೌದು, ಯಾವುದು ಹೌದು ಅದು ಅಲ್ಲ ಎನ್ನುವ ತಾರ್ಕಿಕ ವಿಸ್ಮಯಕ್ಕೆ ನಾವು ಸಿಲುಕಿದ್ದೇವೆ. ಸಾಮಾಜಿಕ ಜಾಲತಾಣಗಳು, ಕೃತಕ ಬುದ್ಧಿಮತ್ತೆ, ನಿರಂತರ ಸ್ಪರ್ಧೆ, ಉದ್ಯೋಗದ ಒತ್ತಡ, ವಿದ್ಯಾಭ್ಯಾಸದ ಸವಾಲುಗಳು, ಬದುಕಿನ ನಿರ್ವಹಣೆ ಮುಂತಾದ ಅಂಶಗಳು ಮನಸ್ಸಿನ ಮೇಲೆ ಪರಿಣಾಮ ಬೀರುತ್ತಿವೆ. ಮಾಹಿತಿಯ ಪ್ರವಾಹ ಹೆಚ್ಚಾದರೂ ಮನಸ್ಸಿನ ನೆಮ್ಮದಿ ಕಡಿಮೆಯಾಗುತ್ತಿರುವುದು ಇಂದಿನ ಸಮಾಜದ ದೊಡ್ಡ ವೈಪರೀತ್ಯವಾಗಿದೆ.

ಇಂದಿನ ಯುವಜನರಲ್ಲಿ ಚಿತ್ತಚಾಂಚಲ್ಯ, ಆತಂಕ, ಖಿನ್ನತೆ, ಏಕಾಂತದ ಭಾವನೆ ಹಾಗೂ ಹೋಲಿಕೆಯ ಮನೋಭಾವ ಹೆಚ್ಚುತ್ತಿರುವುದಕ್ಕೆ ಪ್ರಮುಖ ಕಾರಣ ಮನಸ್ಸಿನ ಮೇಲಿನ ನಿಯಂತ್ರಣದ ಕೊರತೆ. ಸಾಮಾಜಿಕ ಜಾಲತಾಣಗಳಲ್ಲಿ ಇತರರ ಯಶಸ್ಸನ್ನು ಮಾತ್ರ ನೋಡುತ್ತಾ ತಮ್ಮ ಜೀವನವನ್ನು ಕಡಿಮೆ ಅಂದಾಜು ಮಾಡಿಕೊಳ್ಳುವ ಪ್ರವೃತ್ತಿ ಬೆಳೆಯುತ್ತಿದೆ.

ಇದರ ಪರಿಣಾಮ ಆತ್ಮವಿಶ್ವಾಸ ಕುಸಿಯುತ್ತಿದೆ. ಯಾರು ಯಾರಿಗೆ ಹೇಳಬೇಕು, ಯಾರನ್ನು ಯಾವ ರೀತಿಯಲ್ಲಿ ಸರಿದಾರಿಗೆ ತರಬೇಕು ಎನ್ನುವ ಗೊಂದಲದ ವಾತಾವರಣ ನಿರ್ಮಾಣವಾಗಿದೆ. “ಅರಿವೇ ಗುರು” ಎಂಬಂತೆ ನಮ್ಮನ್ನು ನಾವು ಅರಿತಾಗ ನಮ್ಮಿಂದ ಅದೆಷ್ಟೋ ಸಕಾರಾತ್ಮಕ ಬದಲಾವಣೆಗಳು ಸಾಧ್ಯವಾಗುತ್ತವೆ. ಆದ್ದರಿಂದ ಇಂದು ಕೇವಲ ಅಂಕಗಳಿಕೆಗಾಗಿ, ಬದುಕಿನ ತಯಾರಿಗಾಗಿ ಶಿಕ್ಷಣ ನೀಡುವ ಸಂಕುಚಿತ ಭಾವನೆ ಬದಲಾಗಬೇಕು. ಮನುಷ್ಯತ್ವದ ಬದುಕಿಗೆ ಉತ್ತಮ ನಡವಳಿಕೆಗಳನ್ನು ರೂಪಿಸುವ ಶಿಕ್ಷಣದ ಅಗತ್ಯವಿದೆ.

ಈ ಹಿನ್ನೆಲೆಯಲ್ಲಿ ಪ್ರಸ್ತುತ ಸಮಾಜದ ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಬದಲಾವಣೆ ಕೇವಲ ಹೊರಜಗತ್ತಿನಲ್ಲಿ ಅಲ್ಲ; ಅದು ಮೊದಲು ನಮ್ಮೊಳಗೆ ಆರಂಭವಾಗಬೇಕು.

ಮನಸ್ಸಿನ ಮತ್ತೊಂದು ವಿಸ್ಮಯವೆಂದರೆ ಅದರ ಸೃಜನಶೀಲತೆ. ಜಗತ್ತಿನ ಪ್ರತಿಯೊಂದು ಆವಿಷ್ಕಾರವೂ ಮೊದಲು ಯಾರೋ ಒಬ್ಬರ ಮನಸ್ಸಿನಲ್ಲಿ ಹುಟ್ಟಿದ ಕಲ್ಪನೆಯಾಗಿತ್ತು. ವಿಜ್ಞಾನ, ಸಾಹಿತ್ಯ, ಸಂಗೀತ, ಕಲೆ, ಸಂಶೋಧನೆ ಹಾಗೂ ಸಾಮಾಜಿಕ ಪರಿವರ್ತನೆಗಳು ಮನಸ್ಸಿನ ಸೃಜನಶೀಲ ಶಕ್ತಿಯ ಫಲಗಳಾಗಿವೆ.

ಉತ್ತಮ ಚಿಂತನೆಗಳು ವ್ಯಕ್ತಿಯನ್ನು ಮಾತ್ರವಲ್ಲ, ಸಮಾಜವನ್ನೂ ಬದಲಾಯಿಸುವ ಸಾಮರ್ಥ್ಯ ಹೊಂದಿವೆ.

ಭಾರತೀಯ ತತ್ತ್ವಶಾಸ್ತ್ರ ಮನಸ್ಸಿಗೆ ವಿಶೇಷ ಸ್ಥಾನ ನೀಡಿದೆ. ಉಪನಿಷತ್ತುಗಳು, ಭಗವದ್ಗೀತೆ ಹಾಗೂ ಬಸವಾದಿ ಶರಣರ ವಚನಗಳು ಮನಸ್ಸಿನ ಶುದ್ಧತೆ, ನಿಯಂತ್ರಣ ಮತ್ತು ಆತ್ಮಜ್ಞಾನವನ್ನು ಜೀವನದ ಮೂಲ ಮೌಲ್ಯಗಳಾಗಿ ಬೋಧಿಸಿವೆ.

ವಿಶ್ವಗುರು ಬಸವಣ್ಣನವರ ಕಾಯಕ ಮತ್ತು ದಾಸೋಹದ ತತ್ವಗಳು ಮನಸ್ಸನ್ನು ಸ್ವಾರ್ಥದಿಂದ ಸೇವೆಯ ಕಡೆಗೆ ಕೊಂಡೊಯ್ಯುತ್ತವೆ. ಈ ಮೌಲ್ಯಗಳು ಬದುಕಿನಲ್ಲಿ ಅನ್ವಯವಾಗಬೇಕಿದೆ.

ಭಗವಾನ್ ಬುದ್ಧ ಮನಸ್ಸಿನ ಶಾಂತಿಯೇ ನಿಜವಾದ ಸುಖವೆಂದು ಬೋಧಿಸಿದನು. ಮನಸ್ಸಿಗೆ ಶಾಂತಿ ಬೇಕಾದರೆ ಬದುಕಿನ ವಾಸ್ತವವನ್ನು ಇದ್ದಂತೆಯೇ ಅರ್ಥೈಸಿಕೊಳ್ಳಬೇಕು. ಜೀವನ ದುಃಖಮಯ, ಬದುಕು ಶಾಶ್ವತವಲ್ಲ. ಹುಟ್ಟು ಖುಷಿ ನೀಡಿದರೆ, ಸಾವು ದುಃಖ ನೀಡುತ್ತದೆ ಎಂಬ ಸತ್ಯವನ್ನು ಅರಿತು ಸಾಗಬೇಕು. ಅತಿ ಆಸೆಯೇ ದುಃಖಕ್ಕೆ ಕಾರಣ. ಆದ್ದರಿಂದ ಅತಿ ಆಸೆಗಳನ್ನು ತ್ಯಜಿಸಿದಾಗ ಮನಸ್ಸು ಹಿತಮಿತವಾದ ಬದುಕಿನ ಅನುಭವವನ್ನು ನೀಡಬಲ್ಲದು.

ಅಂಕಗಳ ಸ್ಪರ್ಧೆಗಿಂತ ಆತ್ಮವಿಶ್ವಾಸ, ಸಹಾನುಭೂತಿ, ಮಾನವೀಯತೆ, ಸೃಜನಶೀಲತೆ ಹಾಗೂ ಭಾವನಾತ್ಮಕ ಸಮತೋಲನವನ್ನು ಬೆಳೆಸುವ ಶಿಕ್ಷಣವೇ ಇಂದಿನ ಅಗತ್ಯ. ಪೋಷಕರು ಮಕ್ಕಳ ಮನಸ್ಸನ್ನು ಅರ್ಥಮಾಡಿಕೊಳ್ಳಬೇಕು. ಶಿಕ್ಷಕರು ಪ್ರೋತ್ಸಾಹದ ಮಾತುಗಳ ಮೂಲಕ ಅವರ ಆತ್ಮಸ್ಥೈರ್ಯವನ್ನು ಹೆಚ್ಚಿಸಬೇಕು.

ಮನಸ್ಸನ್ನು ಆರೋಗ್ಯವಾಗಿಡಲು ಕೆಲವು ಜೀವನ ಮೌಲ್ಯಗಳು ಅಗತ್ಯ.

ಸಕಾರಾತ್ಮಕ ಚಿಂತನೆ ಬೆಳೆಸುವುದು.

ಪ್ರತಿದಿನ ಸ್ವಲ್ಪ ಸಮಯ ಆತ್ಮಾವಲೋಕನ ಅಥವಾ ಧ್ಯಾನ ಮಾಡುವುದು.

ಉತ್ತಮ ಪುಸ್ತಕಗಳನ್ನು ಓದುವ ಅಭ್ಯಾಸ ಬೆಳೆಸುವುದು.

ಪ್ರಕೃತಿಯೊಂದಿಗೆ ಸಮಯ ಕಳೆಯುವುದು.

ಇತರರೊಂದಿಗೆ ಹೋಲಿಕೆ ಮಾಡುವುದನ್ನು ಕಡಿಮೆ ಮಾಡುವುದು.

ಕುಟುಂಬ ಮತ್ತು ಸ್ನೇಹಿತರೊಂದಿಗೆ ಮುಕ್ತ ಸಂವಾದ ನಡೆಸುವುದು.

ಸೇವಾ ಮನೋಭಾವ ಹಾಗೂ ಕೃತಜ್ಞತೆಯನ್ನು ಜೀವನದ ಭಾಗವಾಗಿಸಿಕೊಳ್ಳುವುದು.

ಇಂತಹ ಅಮೂಲ್ಯವಾದ ವಿಚಾರಧಾರೆಗಳು ನಮ್ಮೊಳಗಿದ್ದಾಗ ಮನಸ್ಸು ಸುಂದರ ಬದುಕನ್ನು ರೂಪಿಸಬಲ್ಲದು.

ಮನಸ್ಸಿನ ನಿಜವಾದ ಸೌಂದರ್ಯ ಅದರ ಕರುಣೆ, ಕ್ಷಮೆ, ಪ್ರೀತಿ ಮತ್ತು ಮಾನವೀಯತೆಯಲ್ಲಿ ಅಡಗಿದೆ. ಹೊರಗಿನ ಸೌಂದರ್ಯ ಕಾಲಕ್ರಮೇಣ ಮಸುಕಾಗಬಹುದು. ಆದರೆ ಒಳ್ಳೆಯ ಮನಸ್ಸಿನ ಬೆಳಕು ಸದಾ ಶಾಶ್ವತವಾಗಿರುತ್ತದೆ. ಆದ್ದರಿಂದ ಮನಸ್ಸನ್ನು ಗೆದ್ದವನು ಲೋಕವನ್ನೇ ಗೆಲ್ಲಬಲ್ಲನು.

ಮನಸ್ಸನ್ನು ಅರಿತವನು ತನ್ನ ಬದುಕಿನ ದಿಕ್ಕನ್ನು ಅರಿಯುತ್ತಾನೆ. ಮನಸ್ಸನ್ನು ನಿಯಂತ್ರಿಸಿದವನು ಸಂಕಷ್ಟದಲ್ಲಿಯೂ ಸಮಚಿತ್ತದಿಂದ ಬದುಕುತ್ತಾನೆ. ಆದ್ದರಿಂದ ನಮ್ಮ ಮನಸ್ಸನ್ನು ಉತ್ತಮ ಆಲೋಚನೆಗಳಿಂದ ಸದೃಢಗೊಳಿಸಬೇಕಿದೆ.

– ಶ್ರೀಮತಿ ಸುಧಾ ಹುಚ್ಚಣ್ಣವರ, ಗದಗ

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img