ವಿಜಯಸಾಕ್ಷಿ ಸುದ್ದಿ, ಗದಗ: ಹಿಂದೂ ಸಂಪ್ರದಾಯದಲ್ಲಿ ಕಾರ ಹುಣ್ಣಿಮೆಯನ್ನು ಹಬ್ಬಗಳ ಮುನ್ನುಡಿಯಾಗಿ ಪರಿಗಣಿಸಲಾಗುತ್ತದೆ. ಕಾರ ಹುಣ್ಣಿಮೆ ಯಾವ ವಾರದಂದು ಬರುತ್ತದೆಯೋ, ನಾಗರ ಪಂಚಮಿ, ಗಣೇಶ ಚತುರ್ಥಿ, ವಿಜಯದಶಮಿ ಹಾಗೂ ಬಲಿಪಾಡ್ಯಮಿ ಸೇರಿದಂತೆ ಪ್ರಮುಖ ಹಬ್ಬಗಳೂ ಅದೇ ವಾರದಂದು ಆಚರಿಸಲ್ಪಡುವ ವಿಶೇಷತೆ ಇದೆ.
ಆಷಾಢ ಮಾಸದಲ್ಲಿ ದೇವಿಯರಿಗೆ ಉಡಿ ತುಂಬುವುದು, ಆರತಿ ಬೆಳಗುವುದು ಹಾಗೂ ನೈವೇದ್ಯ ಸಮರ್ಪಿಸುವುದು ಮಹಿಳೆಯರ ಸಂಪ್ರದಾಯವಾಗಿದೆ. ಇದೇ ಹಿನ್ನೆಲೆಯಲ್ಲಿ ಎಸ್ಎಸ್ಕೆ ಶ್ರೀ ಜಗದಂಬಾ ಮಹಿಳಾ ಮಂಡಳಿ ವತಿಯಿಂದ ಈ ವರ್ಷದ ಆಷಾಢ ಮಾಸದ ಉಡಿ ತುಂಬುವ ಕಾರ್ಯಕ್ರಮವನ್ನು ಭಕ್ತಿಭಾವದಿಂದ ಆಚರಿಸಲಾಯಿತು.
ಜುಲೈ 24ರಂದು ಬೆಳಿಗ್ಗೆ 11 ಗಂಟೆಗೆ ಮಂಡಳಿಯ ಪದಾಧಿಕಾರಿಗಳು ಹಾಗೂ ಸದಸ್ಯೆಯರು ಸರಾಫ್ ಬಜಾರ್ ಅಂಬಾಭವಾನಿ ದೇವಸ್ಥಾನದಲ್ಲಿ ಸೇರಿ ಜಗದಂಬಾ ದೇವಿ, ತುಳಜಾಭವಾನಿ ದೇವಿ, ನವದುರ್ಗಾ ದೇವಿ ಹಾಗೂ ಹುಡ್ಕೋ ಅಂಬಾಭವಾನಿ ದೇವಿಗೆ ಆಷಾಢ ಮಾಸದ ಉಡಿ ತುಂಬಿ ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ದೇವಸ್ಥಾನಕ್ಕೆ ಆಗಮಿಸಿದ್ದ ಮಹಿಳೆಯರಿಗೂ ಉಡಿ ತುಂಬಿ ದೇವಿಯ ಆಶೀರ್ವಾದ ಪಡೆಯುವಂತೆ ಮಾಡಿ, ಧಾರ್ಮಿಕ ಸಂಪ್ರದಾಯವನ್ನು ಅರ್ಥಪೂರ್ಣವಾಗಿ ಆಚರಿಸಿದರು. ಕಾರ್ಯಕ್ರಮದಲ್ಲಿ ಮಹಿಳಾ ಮಂಡಳಿಯ ಪದಾಧಿಕಾರಿಗಳು, ಸದಸ್ಯೆಯರು ಹಾಗೂ ಭಕ್ತರು ಭಾಗವಹಿಸಿದ್ದರು.



