ವಿಜಯಸಾಕ್ಷಿ ಸುದ್ದಿ, ಧಾರವಾಡ: ಶಿವಶರಣ ಹಡಪದ ಅಪ್ಪಣ್ಣ ಅವರು ಮಾನವ ಸೇವೆ, ಸಮಾನತೆ ಮತ್ತು ಸೌಹಾರ್ದತೆಯ ಬದುಕನ್ನು ಪ್ರತಿಪಾದಿಸಿದ ಮಹಾನ್ ಶಿವಶರಣರಾಗಿದ್ದು, ಅವರ ತತ್ವಗಳು ಇಂದಿಗೂ ಸಮಾಜಕ್ಕೆ ಮಾರ್ಗದರ್ಶಿಯಾಗಿವೆ ಎಂದು ಹುಬ್ಬಳ್ಳಿ–ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ್ ಸನದಿ ಹೇಳಿದರು.
ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕರ್ನಾಟಕ ಕುಲಪುರೋಹಿತ ಆಲೂರ ವೆಂಕಟರಾವ ಸಾಂಸ್ಕೃತಿಕ ಭವನದಲ್ಲಿ ಬುಧವಾರ ಆಯೋಜಿಸಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಸವಣ್ಣನವರ ಸಾಮಾಜಿಕ ಕ್ರಾಂತಿಗೆ ಹಡಪದ ಅಪ್ಪಣ್ಣ ಅವರು ಅಪಾರ ಕೊಡುಗೆ ನೀಡಿದ್ದು, ಶರಣರ ವಚನಗಳ ಮೂಲಕ ಸಮಾನತೆ, ಮಾನವೀಯತೆ ಮತ್ತು ಸತ್ಯದ ಬದುಕಿನ ಸಂದೇಶವನ್ನು ಜನರಲ್ಲಿ ಬಿತ್ತಿದರು. ವಿದ್ಯಾರ್ಥಿಗಳಲ್ಲಿ ಬಸವ ತತ್ವಗಳು, ಶರಣರ ವಚನಗಳು ಮತ್ತು ದೇಶದ ಇತಿಹಾಸದ ಕುರಿತು ಅರಿವು ಮೂಡಿಸಿದರೆ ಅವರ ವ್ಯಕ್ತಿತ್ವ ವಿಕಸನದ ಜೊತೆಗೆ ಉತ್ತಮ ಸಮಾಜ ನಿರ್ಮಾಣಕ್ಕೂ ಸಹಕಾರಿಯಾಗಲಿದೆ ಎಂದು ಹೇಳಿದರು.
ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಪ್ರಕಾಶ ಹಳಿಯಾಳ ಮಾತನಾಡಿ, ಹಡಪದ ಅಪ್ಪಣ್ಣ ಅವರು ಶ್ರದ್ಧೆ, ಭಕ್ತಿ ಹಾಗೂ ಪ್ರಾಮಾಣಿಕ ಕಾಯಕದ ಮೂಲಕ ಮಾದರಿಯಾಗಿದ್ದು, ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಿರೇಮಲ್ಲೂರು ಈಶ್ವರನ್ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಡಾ. ಈರಣ್ಣ ಇಂಜಗನೇರಿ ಅವರು ಶಿವಶರಣ ಹಡಪದ ಅಪ್ಪಣ್ಣ ಅವರ ಕುರಿತು ವಿಶೇಷ ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಜಿಲ್ಲಾ ಪ್ರತಿನಿಧಿ ಫಕೀರೇಶ ಅಡಿವೆಪ್ಪ ಹಡಪದ, ಜಿಲ್ಲಾ ಹಡಪದ ನೌಕರರ ಸಂಘದ ಪ್ರಮುಖರಾದ ಮಹಾರುದ್ರಪ್ಪ ಪಡೆಸೂರ, ನಿಂಗರಾಜ ಹಡಪದ, ಶಂಕರ ಹಡಪದ, ಮಂಜುಳಾ ಪಡೆಸೂರ, ಕಿರಣ ಹಡಪದ, ಮಾರುತಿ ಹಡಪದ, ಶಿವಕುಮಾರ ಅಣ್ಣಿಗೇರಿ, ನಾಗರಾಜ ಅಂಗಡಿ, ಈರಣ್ಣ ಹಡಪದ, ಸಂಗಮೇಶ ಬೂದಿಹಾಳ, ಫಕೀರಪ್ಪ ಮೂಲಿಮನಿ, ಮಲ್ಲಪ್ಪ ಹಡಪದ ಹಾಗೂ ಶಾಂತವ್ವ ಹಡಪದ ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಶೇ.95ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಮಾಜದ ಮುಖಂಡರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
“ಶರಣರ ವಚನಗಳು ಮಾನವೀಯತೆ, ಸಹಬಾಳ್ವೆ ಮತ್ತು ಸತ್ಯದ ಬದುಕಿಗೆ ದಾರಿದೀಪ. ಯುವಜನತೆ ಮಹನೀಯರ ಆದರ್ಶಗಳನ್ನು ಅಳವಡಿಸಿಕೊಂಡಾಗ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ಸಾಧ್ಯ.”
— ಶಾಕೀರ್ ಸನದಿ, ಅಧ್ಯಕ್ಷರು, ಹುಬ್ಬಳ್ಳಿ–ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ



