ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹಾಗೂ ಅವರ ಪತ್ನಿ ಪಾಯಲ್ ಅಬ್ದುಲ್ಲಾ ಅವರ ದಾಂಪತ್ಯ ಜೀವನಕ್ಕೆ ಅಧಿಕೃತ ಅಂತ್ಯ ಸಿಕ್ಕಿದೆ. ಪರಸ್ಪರ ಒಪ್ಪಿಗೆಯೊಂದಿಗೆ ವಿವಾಹವನ್ನು ವಿಸರ್ಜಿಸಲು ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್, ದಂಪತಿಗೆ ವಿಚ್ಛೇದನ ಮಂಜೂರು ಮಾಡಿದೆ.
ದಂಪತಿ ತಮ್ಮ ನಡುವಿನ ಎಲ್ಲ ವೈಯಕ್ತಿಕ ಹಾಗೂ ಕಾನೂನು ಸಂಬಂಧಿತ ವಿವಾದಗಳನ್ನು ಪರಸ್ಪರ ಒಪ್ಪಂದದ ಮೂಲಕ ಬಗೆಹರಿಸಿಕೊಂಡಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಒಪ್ಪಂದದ ಷರತ್ತುಗಳಂತೆ ವಿಚ್ಛೇದನಕ್ಕೆ ನ್ಯಾಯಾಲಯ ಅನುಮತಿ ನೀಡಿದೆ.
ಈ ಹಿಂದೆ ಒಮರ್ ಅಬ್ದುಲ್ಲಾ ಸಲ್ಲಿಸಿದ್ದ ವಿಚ್ಛೇದನ ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಅವರು 2024ರಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಒಮರ್ ಅಬ್ದುಲ್ಲಾ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಇಬ್ಬರೂ ತಮ್ಮ ತಮ್ಮ ಸ್ವತಂತ್ರ ಜೀವನವನ್ನು ಮುಂದುವರಿಸಲು ನಿರ್ಧರಿಸಿದ್ದು, ಪರಸ್ಪರ ಒಪ್ಪಿಗೆಯ ಇತ್ಯರ್ಥದ ಎಲ್ಲ ದಾಖಲೆಗಳನ್ನು ಈಗಾಗಲೇ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅಲೋಕ್ ಆರಾಧೆ ಅವರಿದ್ದ ಪೀಠ, ಒಪ್ಪಂದದ ಪ್ರಕಾರವೇ ಆದೇಶ ಹೊರಡಿಸಲಾಗುವುದು. ಜೊತೆಗೆ, ದಂಪತಿ ನಡುವಿನ ಬಾಕಿ ಉಳಿದಿರುವ ಎಲ್ಲಾ ಪ್ರಕರಣಗಳನ್ನು ಸಹ ಹಿಂಪಡೆಯಲಾಗುವುದು ಎಂದು ತಿಳಿಸಿತು.
ಜುಲೈ 22ರಂದು ವಿಚ್ಛೇದನಕ್ಕೆ ಸಂಬಂಧಿಸಿದ ಪರಸ್ಪರ ಒಪ್ಪಿಗೆಯ ಷರತ್ತುಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಅದನ್ನು ಆಧಾರವಾಗಿಟ್ಟುಕೊಂಡು ವಿವಾಹವನ್ನು ರದ್ದುಗೊಳಿಸುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಲಾಗಿತ್ತು. ನ್ಯಾಯಾಲಯ ಇದೀಗ ಅದಕ್ಕೆ ಅನುಮೋದನೆ ನೀಡಿದೆ.



