ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಏಕಬಳಕೆಯ ಪ್ಲಾಸ್ಟಿಕ್ (SUP) ಉತ್ಪನ್ನಗಳ ಉತ್ಪಾದನೆ, ಸಂಗ್ರಹಣೆ, ವಿತರಣೆ, ಮಾರಾಟ ಹಾಗೂ ಬಳಕೆಯ ವಿರುದ್ಧ ಗಜೇಂದ್ರಗಡ ಪುರಸಭೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ನಿಷೇಧಿತ ವಸ್ತುಗಳನ್ನು ವಶಪಡಿಸಿಕೊಳ್ಳುವುದರ ಜೊತೆಗೆ ಭಾರಿ ದಂಡ ವಿಧಿಸಿ, ಅಗತ್ಯವಿದ್ದರೆ ಕೈಗಾರಿಕೆಗಳನ್ನು ಮುಚ್ಚುವ ಕ್ರಮವನ್ನೂ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಕೇಂದ್ರ ಸರ್ಕಾರದ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ (ತಿದ್ದುಪಡಿ) ನಿಯಮಗಳು–2021ರ ಅನ್ವಯ ಪ್ಲಾಸ್ಟಿಕ್ ಬ್ಯಾನರ್, ಬಂಟಿಂಗ್ಸ್, ಪ್ಲೇಕ್ಸ್, ಕಟೌಟ್, ಧ್ವಜ, ತಟ್ಟೆ, ಕಪ್, ಲೋಟ, ಚಮಚ, ಫೋರ್ಕ್, ಚಾಕು, ಸ್ಟ್ರಾ, ಥರ್ಮಾಕೋಲ್ ಉತ್ಪನ್ನಗಳು, ಪ್ಲಾಸ್ಟಿಕ್ ಪ್ಯಾಕಿಂಗ್ ಫಿಲ್ಮ್, 100 ಮೈಕ್ರಾನ್‌ಗಿಂತ ಕಡಿಮೆ ದಪ್ಪದ ಪ್ಲಾಸ್ಟಿಕ್ ಹಾಗೂ ಪಿವಿಸಿ ಬ್ಯಾನರ್ ಸೇರಿದಂತೆ ಹಲವು ಏಕಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ದೇಶಾದ್ಯಂತ ನಿಷೇಧಿಸಲಾಗಿದೆ.
ಅಂಗಡಿ ಮಾಲೀಕರು, ಬೀದಿ ವ್ಯಾಪಾರಿಗಳು, ವಾಣಿಜ್ಯ ಸಂಸ್ಥೆಗಳು, ಮಾಲ್‌ಗಳು, ಮಾರುಕಟ್ಟೆಗಳು, ಸಿನಿಮಾ ಮಂದಿರಗಳು, ಪ್ರವಾಸಿ ತಾಣಗಳು, ಶಾಲೆ-ಕಾಲೇಜುಗಳು, ಆಸ್ಪತ್ರೆಗಳು, ಕಚೇರಿಗಳು ಹಾಗೂ ಇ-ಕಾಮರ್ಸ್ ಸಂಸ್ಥೆಗಳು ಸೇರಿದಂತೆ ಎಲ್ಲರೂ ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಉಲ್ಲಂಘನೆ ಕಂಡುಬಂದರೆ ಪರಿಸರ (ಸಂರಕ್ಷಣೆ) ಕಾಯ್ದೆ–1986ರಡಿ ಪ್ರಕರಣ ದಾಖಲಿಸಿ ನಿಷೇಧಿತ ವಸ್ತುಗಳನ್ನು ವಶಪಡಿಸಿಕೊಳ್ಳಲಾಗುವುದು. ಅಗತ್ಯವಿದ್ದರೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಘಟಕ ಮುಚ್ಚುವ ಕ್ರಮ ಜರುಗಿಸುವುದರ ಜೊತೆಗೆ ಪ್ರತಿ ಟನ್‌ಗೆ ₹5,000 ಪರಿಸರ ಪರಿಹಾರ ಶುಲ್ಕ ವಿಧಿಸಲಾಗುವುದು ಎಂದು ಪುರಸಭೆ ತಿಳಿಸಿದೆ.
ನಿರ್ಮಾಣ ತ್ಯಾಜ್ಯ ರಸ್ತೆಗೆ ಎಸೆದರೂ ಕಾನೂನು ಕ್ರಮ
ನಿರ್ಮಾಣ, ನೆಲಸಮ, ದುರಸ್ತಿ ಹಾಗೂ ನವೀಕರಣ ಕಾಮಗಾರಿಗಳಿಂದ ಉಂಟಾಗುವ ತ್ಯಾಜ್ಯವನ್ನು ರಸ್ತೆ, ಕಾಲುವೆ, ಕೆರೆ, ನದಿ, ಖಾಲಿ ಜಾಗ ಅಥವಾ ಸರ್ಕಾರಿ ಭೂಮಿಯಲ್ಲಿ ಎಸೆಯುವುದು ಕಾನೂನುಬಾಹಿರವಾಗಿದೆ ಎಂದು ಪುರಸಭೆ ಮತ್ತೊಮ್ಮೆ ಸ್ಪಷ್ಟಪಡಿಸಿದೆ.
ಕಾಂಕ್ರೀಟ್, ಇಟ್ಟಿಗೆ, ಲೋಹ, ಮರ, ಗಾಜು, ಪ್ಲಾಸ್ಟಿಕ್ ಹಾಗೂ ಮಣ್ಣಿನ ತ್ಯಾಜ್ಯವನ್ನು ಮೂಲದಲ್ಲೇ ಪ್ರತ್ಯೇಕಿಸಿ ಪುರಸಭೆಯ ಅಧಿಕೃತ ವಾಹನ ಅಥವಾ ಮಾನ್ಯತೆ ಪಡೆದ ಸಂಗ್ರಹಣಾ ಹಾಗೂ ಮರುಸಂಸ್ಕರಣಾ ಕೇಂದ್ರಗಳಿಗೆ ಮಾತ್ರ ಒಪ್ಪಿಸಬೇಕು. ದೊಡ್ಡ ನಿರ್ಮಾಣ ಯೋಜನೆಗಳು ನಿರ್ಮಾಣ ಮತ್ತು ಕೆಡವುವಿಕೆ ತ್ಯಾಜ್ಯ ನಿರ್ವಹಣಾ ಯೋಜನೆ ರೂಪಿಸಿ ಜಾರಿಗೊಳಿಸುವುದು ಕಡ್ಡಾಯವಾಗಿದೆ.
ನಿಯಮ ಉಲ್ಲಂಘಿಸುವವರ ವಿರುದ್ಧ ಪರಿಸರ ಪರಿಹಾರ ಶುಲ್ಕ ಸೇರಿದಂತೆ ದಂಡ ವಿಧಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಗಜೇಂದ್ರಗಡ ಪುರಸಭೆ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

