ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಸತ್ಯ, ಸಾಮಾಜಿಕ ನ್ಯಾಯ ಹಾಗೂ ಜನಪರ ಮೌಲ್ಯಗಳನ್ನು ಎತ್ತಿಹಿಡಿದು ಸಮಾಜಕ್ಕೆ ಸತ್ಯದ ಅರಿವು ಮೂಡಿಸುವ ಪತ್ರಿಕೆಗಳೇ ಸಮಾಜದ ನಿಜವಾದ ಆಸ್ತಿಯಾಗಿದ್ದು, ಪತ್ರಿಕೋದ್ಯಮ ತನ್ನ ಧರ್ಮವನ್ನು ಎಂದಿಗೂ ಮರೆಯಬಾರದು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಜಾತಾ ದೊಡ್ಡಮನಿ ಹೇಳಿದರು.
ಶಿರಹಟ್ಟಿಯ ಡಿ. ದೇವರಾಜ ಅರಸು ಸಭಾಭವನದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪತ್ರಿಕೋದ್ಯಮ ಜನರ ಧ್ವನಿಯಾಗಿ ಕಾರ್ಯನಿರ್ವಹಿಸಬೇಕು. ಪತ್ರಕರ್ತರು ಯಾವುದೇ ಒತ್ತಡ, ಆಮಿಷಗಳಿಗೆ ಮಣಿಯದೆ ಸತ್ಯವನ್ನು ನಿರ್ಭೀತಿಯಿಂದ ಸಮಾಜದ ಮುಂದೆ ತರುವ ಜವಾಬ್ದಾರಿ ಹೊಂದಿದ್ದಾರೆ. ಅಂತಹ ಪತ್ರಿಕೆಗಳಿಗೆ ಮಾತ್ರ ಜನರ ವಿಶ್ವಾಸ ಮತ್ತು ಗೌರವ ದೊರೆಯುತ್ತದೆ ಎಂದು ಹೇಳಿದರು.
ಶಿರಹಟ್ಟಿಯಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕೆ ಪತ್ರಕರ್ತರು ಸಂಕಲ್ಪ ಮಾಡಿದರೆ ನಿವೇಶನ ಖರೀದಿ ಹಾಗೂ ಭವನ ನಿರ್ಮಾಣಕ್ಕೆ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
‘ಉತ್ತರಪ್ರಭ ಪತ್ರಿಕೆ’ ಸಂಪಾದಕ ಹಾಗೂ ನ್ಯಾಯವಾದಿ ರವಿಕಾಂತ ಅಂಗಡಿ ಮಾತನಾಡಿ, ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಮುದ್ರಣ ಮಾಧ್ಯಮ ಸವಾಲು ಎದುರಿಸುತ್ತಿದ್ದರೂ ಸಮಾಜ ಮತ್ತು ಸರ್ಕಾರಕ್ಕೆ ಸತ್ಯದ ಅರಿವು ಮೂಡಿಸುವಲ್ಲಿ ಪತ್ರಿಕೆಗಳ ಪಾತ್ರ ಇಂದಿಗೂ ಮಹತ್ವದ್ದಾಗಿದೆ.
ಪ್ರತಿಯೊಬ್ಬರೂ ಪತ್ರಿಕೆಗಳನ್ನು ಖರೀದಿಸಿ ಓದುವ ಮೂಲಕ ಪತ್ರಿಕೋದ್ಯಮವನ್ನು ಉಳಿಸಬೇಕು ಎಂದು ಕರೆ ನೀಡಿದರು.
ಪತ್ರಕರ್ತರಿಗೆ ಸ್ವಂತ ನೆಲೆ ಅಗತ್ಯವಾಗಿದ್ದು, ಸ್ಥಳೀಯ ಪಟ್ಟಣ ಪಂಚಾಯಿತಿ ನಿವೇಶನ ಒದಗಿಸಿದರೆ ಪತ್ರಿಕಾ ಭವನ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಎಚ್.ಡಿ. ಮಾಗಡಿ, ಡಾ. ವೆಂಕಟೇಶ ರಾಠೋಡ, ಎಸ್.ಬಿ. ಮಹಾಜನಶೆಟ್ಟರ, ವಿ.ವಿ. ಕಪ್ಪತ್ತನವರ, ಡಿ.ಕೆ. ಹೊನ್ನಪ್ಪನವರ, ಡಾ. ಪ್ರಕಾಶ ಹೊಸಮನಿ, ಶರಣಬಸವ ಪಾಟೀಲ ಸೇರಿದಂತೆ ಹಲವರು ಮಾತನಾಡಿ, ಪತ್ರಿಕೋದ್ಯಮದ ಸಾಮಾಜಿಕ ಹೊಣೆಗಾರಿಕೆ, ಪತ್ರಿಕಾ ಭವನ ನಿರ್ಮಾಣದ ಅಗತ್ಯತೆ ಹಾಗೂ ಪತ್ರಕರ್ತರ ಸೇವೆಯನ್ನು ಪ್ರಶಂಸಿಸಿದರು.
ಇದೇ ವೇಳೆ ಪತ್ರಿಕಾ ಭವನ ನಿರ್ಮಾಣಕ್ಕೆ ತಲಾ ₹25 ಸಾವಿರ ಆರ್ಥಿಕ ನೆರವು ನೀಡುವುದಾಗಿ ಭರವಸೆ ವ್ಯಕ್ತಪಡಿಸಿದರು.
ಸ್ಥಳೀಯ ಮಠದ ಪೀಠಾಧ್ಯಕ್ಷ ಶ್ರೀ ಫಕೀರಸಿದ್ದರಾಮ ಸ್ವಾಮೀಜಿ ಮಾತನಾಡಿ, ಸೇವಾ ಮನೋಭಾವದಿಂದ ಸಮಾಜಕ್ಕೆ ಬೆಳಕು ಚೆಲ್ಲುತ್ತಿರುವ ಪತ್ರಕರ್ತರ ಕಾರ್ಯ ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಹಾದೇವಪ್ಪ ಸ್ವಾಮಿ ಮಾತನಾಡಿ, ಪತ್ರಿಕಾ ಭವನ ನಿರ್ಮಾಣಕ್ಕೆ ಸಹಕಾರ ನೀಡಿದ ಗಣ್ಯರಿಗೆ ಅಭಿನಂದನೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಸಂಘದ ವತಿಯಿಂದ ಮಂಜುನಾಥ ಅರೆಪಲ್ಲಿ ಹಾಗೂ ಅರ್ಷದ್ ಅಲಿ ಖಾಜಿ ಅವರಿಗೆ ವಾರ್ಷಿಕ ಅತ್ಯುತ್ತಮ ಪತ್ರಕರ್ತ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜು ಹೆಬ್ಬಳ್ಳಿ, ಕಾರ್ಯದರ್ಶಿ ಚಂದ್ರು ಕುಸ್ಲಾಪೂರ, ಪ್ರ.ಕಾ. ಶರಣು ದೊಡ್ಡೂರ, ಸಿಪಿಐ ಬಿ.ವಿ. ನ್ಯಾಮಗೌಡ, ವಿಶ್ವನಾಥ ಕಪ್ಪತ್ತನವರ, ಡಾ. ಭೀಮಸಿಂಗ್ ರಾಠೋಡ, ವಿ.ಪಿ. ಮಠಪತಿ, ಎನ್.ಆರ್. ಕುಲಕರ್ಣಿ, ವೀರಣ್ಣ ಅಂಗಡಿ, ವೀರಯ್ಯ ಮಠಪತಿ, ತಿಪ್ಪಣ್ಣ ಕೊಂಚಿಗೇರಿ, ಸಿ.ಸಿ. ನೂರಶೆಟ್ಟರ, ತಿಮ್ಮರಡ್ಡಿ ಮರಡ್ಡಿ, ಶಿವನಗೌಡ ಪಾಟೀಲ, ಮೋಹನ ಗುತ್ತೆಮ್ಮನವರ, ಎಂ.ಕೆ. ಲಮಾಣಿ, ಸಂದೀಪ ಕಪ್ಪತ್ತನವರ, ಹೊನ್ನಪ್ಪ ಶಿರಹಟ್ಟಿ, ಡಾ. ಸುನೀಲ ಬುರಬುರೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
“ಸತ್ಯವನ್ನು ನಿರ್ಭೀತಿಯಿಂದ ಸಮಾಜದ ಮುಂದೆ ತರುವ ಪತ್ರಿಕೆಗಳೇ ಪ್ರಜಾಪ್ರಭುತ್ವದ ಶಕ್ತಿಯಾಗಿವೆ. ಪತ್ರಿಕೋದ್ಯಮ ತನ್ನ ಧರ್ಮವನ್ನು ಉಳಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಅದರ ವಿಶ್ವಾಸ ಉಳಿಯುತ್ತದೆ.”
– ಸುಜಾತಾ ದೊಡ್ಡಮನಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ



