ಬೆಂಗಳೂರು: ಮುಂದಿನ ದಿನಗಳಲ್ಲಿ ಕಾವೇರಿ ನೀರಿನ ಲಭ್ಯತೆಯಲ್ಲಿ ಸವಾಲು ಎದುರಾಗುವ ಸಾಧ್ಯತೆ ಹಿನ್ನೆಲೆಯಲ್ಲಿ, ಕುಡಿಯುವ ನೀರಿನ ಸಮರ್ಪಕ ಬಳಕೆಗೆ ಬೆಂಗಳೂರು ಜಲಮಂಡಳಿ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ.
ಈ ಕುರಿತು ಮಾಹಿತಿ ನೀಡಿರುವ ಜಲಮಂಡಳಿ ಅಧ್ಯಕ್ಷೆ ಮಂಜುಳಾ, ಪ್ರಸ್ತುತ ಕಾವೇರಿ ಜಲಾಶಯಗಳಲ್ಲಿ ಸುಮಾರು 17 ಟಿಎಂಸಿ ನೀರು ಲಭ್ಯವಿದೆ. ಆದರೆ ಈ ನೀರು ಬೆಂಗಳೂರು ಮಾತ್ರವಲ್ಲದೆ ಮಂಡ್ಯ, ಮೈಸೂರು ಸೇರಿದಂತೆ ಹಲವು ನಗರಗಳು ಹಾಗೂ ಜಿಲ್ಲೆಗಳಿಗೂ ಪೂರೈಕೆ ಮಾಡಬೇಕಿರುವುದರಿಂದ ನೀರಿನ ಬಳಕೆಯಲ್ಲಿ ಕಟ್ಟುನಿಟ್ಟಿನ ಕ್ರಮ ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನ ಕುಡಿಯುವ ನೀರಿನ ಅಗತ್ಯಕ್ಕೆ ಸುಮಾರು 2.2 ಟಿಎಂಸಿ ನೀರು ಬೇಕಾಗುತ್ತದೆ. ಹೀಗಾಗಿ ನೀರಿನ ಅನಗತ್ಯ ಬಳಕೆಯನ್ನು ತಡೆಯುವ ಉದ್ದೇಶದಿಂದ ಶೀಘ್ರದಲ್ಲೇ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತರಲಾಗುವುದು ಎಂದು ಹೇಳಿದ್ದಾರೆ.
ಜಲಮಂಡಳಿ ಸಿದ್ಧಪಡಿಸುತ್ತಿರುವ ಪ್ರಮುಖ ಮಾರ್ಗಸೂಚಿಗಳು:
- ಕುಡಿಯುವ ನೀರನ್ನು ಅನ್ಯ ಉದ್ದೇಶಗಳಿಗೆ ಬಳಸುವಂತಿಲ್ಲ.
- ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಕುಡಿಯುವ ನೀರು ಬಳಕೆ ನಿಷೇಧ.
- ವಾಹನಗಳ ಸ್ವಚ್ಛತೆಗೆ ಕುಡಿಯುವ ನೀರು ಬಳಸುವಂತಿಲ್ಲ.
- ನೀರಿನ ಉಳಿತಾಯಕ್ಕಾಗಿ ಹೆಚ್ಚಿನ ಪ್ರಮಾಣದಲ್ಲಿ ಏರಿಯೇಟರ್‌ಗಳ ಅಳವಡಿಕೆಗೆ ಉತ್ತೇಜನ.
- ನೀರಿನ ಕೊರತೆ ಇರುವ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ಪೂರೈಕೆ.
- ಅಗತ್ಯವಿರುವ ಕಡೆಗಳಲ್ಲಿ ರೀ-ಬೋರ್ ವ್ಯವಸ್ಥೆ ಕಲ್ಪಿಸಲು ಕ್ರಮ.
ನಿಯಮಗಳನ್ನು ಉಲ್ಲಂಘಿಸುವವರಿಗೆ ದಂಡ ವಿಧಿಸಲಾಗುವುದು ಎಂದು ಜಲಮಂಡಳಿ ಎಚ್ಚರಿಕೆ ನೀಡಿದೆ. ಈಗಾಗಲೇ ಕುಡಿಯುವ ನೀರನ್ನು ಅನ್ಯ ಉದ್ದೇಶಗಳಿಗೆ ಬಳಸಿದವರ ವಿರುದ್ಧ ಕ್ರಮ ಕೈಗೊಂಡಿದ್ದು,
ಸುಮಾರು 600 ಕೋಟಿ ರೂಪಾಯಿ ದಂಡದ ಮೊತ್ತವನ್ನು ಸಂಗ್ರಹಿಸಲಾಗಿದೆ ಎಂದು ಜಲಮಂಡಳಿ ಅಧ್ಯಕ್ಷೆ ಮಂಜುಳಾ ತಿಳಿಸಿದ್ದಾರೆ. ಕಾವೇರಿ ನೀರಿನ ಸಂರಕ್ಷಣೆ ಹಾಗೂ ಸಮರ್ಪಕ ಬಳಕೆಗೆ ಸಾರ್ವಜನಿಕರು ಸಹಕರಿಸುವಂತೆ ಜಲಮಂಡಳಿ ಮನವಿ ಮಾಡಿದೆ.



