ಅಮರಾವತಿ: ಆಂಧ್ರ ಪ್ರದೇಶದ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಮಹತ್ವದ ಕೊಡುಗೆ ನೀಡಿದ್ದಾರೆ. ರಾಜ್ಯದಲ್ಲಿ ಒಟ್ಟು ₹17,900 ಕೋಟಿಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ಪ್ರಧಾನಿ, ವಿಜಯನಗರಂ ಜಿಲ್ಲೆಯ ಭೋಗಾಪುರಂನಲ್ಲಿ ನಿರ್ಮಿಸಲಾಗಿರುವ ಅಳ್ಳೂರಿ ಸೀತಾರಾಮ ರಾಜು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದರು.
ಭೋಗಾಪುರಂನಲ್ಲಿ ನಡೆದ ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಈ ಯೋಜನೆಗಳು ‘ಸ್ವರ್ಣ ಆಂಧ್ರ’ ನಿರ್ಮಾಣದ ಗುರಿಗೆ ಮತ್ತಷ್ಟು ವೇಗ ನೀಡಲಿವೆ ಎಂದು ಹೇಳಿದರು. ಅಭಿವೃದ್ಧಿ ಕ್ಷೇತ್ರದಲ್ಲಿ ಆಂಧ್ರ ಪ್ರದೇಶ ಹೊಸ ದಾಖಲೆಗಳನ್ನು ನಿರ್ಮಿಸುತ್ತಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಧಾನಿ ಮೋದಿ ಅವರ ಪ್ರವಾಸದ ಪ್ರಮುಖ ಕಾರ್ಯಕ್ರಮವಾಗಿದ್ದ ಭೋಗಾಪುರಂ ವಿಮಾನ ನಿಲ್ದಾಣವನ್ನು ಸುಮಾರು ₹5,000 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು ಆಂಧ್ರ ಪ್ರದೇಶದ ಮೂರನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ.
ಸ್ವಾತಂತ್ರ್ಯ ಹೋರಾಟಗಾರ ಹಾಗೂ ಆದಿವಾಸಿ ನಾಯಕ ಅಳ್ಳೂರಿ ಸೀತಾರಾಮ ರಾಜು ಅವರ ಹೆಸರನ್ನು ವಿಮಾನ ನಿಲ್ದಾಣಕ್ಕೆ ಇಡಲಾಗಿದೆ. ಮೊದಲ ಹಂತದಲ್ಲಿ ಈ ವಿಮಾನ ನಿಲ್ದಾಣವು ವರ್ಷಕ್ಕೆ 60 ಲಕ್ಷ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದ್ದು, ಮುಂದಿನ ದಿನಗಳಲ್ಲಿ ಇದನ್ನು 4 ಕೋಟಿ ಪ್ರಯಾಣಿಕರ ಸಾಮರ್ಥ್ಯಕ್ಕೆ ವಿಸ್ತರಿಸುವ ಯೋಜನೆ ರೂಪಿಸಲಾಗಿದೆ.
ವಿಮಾನ ನಿಲ್ದಾಣ ಉದ್ಘಾಟನೆ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಅಳ್ಳೂರಿ ಸೀತಾರಾಮ ರಾಜು ಅವರು ಆದಿವಾಸಿಗಳ ಹಕ್ಕುಗಳಿಗಾಗಿ ಹೋರಾಡಿದ ಇದೇ ನೆಲದಲ್ಲಿ ಈ ವಿಮಾನ ನಿಲ್ದಾಣ ನಿರ್ಮಾಣವಾಗಿದೆ ಎಂದು ಹೇಳಿದರು.
“ಭೋಗಾಪುರಂ ವಿಮಾನ ನಿಲ್ದಾಣವು ಉತ್ತರ ಆಂಧ್ರದ ಅಭಿವೃದ್ಧಿಗೆ ಹೊಸ ರನ್ವೇ ಆಗಲಿದೆ. ಇದು ರಾಜ್ಯದ ಯುವಜನತೆಗೆ ಉತ್ತಮ ಭವಿಷ್ಯದ ಲಾಂಚ್ಪ್ಯಾಡ್ ಆಗಲಿದೆ” ಎಂದು ಪ್ರಧಾನಿ ಹೇಳಿದರು.
ಇದೇ ವೇಳೆ ಕಾಂಗ್ರೆಸ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ಹಿಂದೆ ವಿಮಾನ ನಿಲ್ದಾಣಗಳಿಗೆ ಒಂದೇ ಕುಟುಂಬದ ಹೆಸರನ್ನು ಇಡುವ ಸಂಪ್ರದಾಯವಿತ್ತು ಎಂದು ಟೀಕಿಸಿದರು.
“ನಮ್ಮ ಸರ್ಕಾರ ಆ ಸಂಪ್ರದಾಯವನ್ನು ಬದಲಿಸಿದೆ. ಅಯೋಧ್ಯೆಯ ವಿಮಾನ ನಿಲ್ದಾಣಕ್ಕೆ ವಾಲ್ಮೀಕಿ ಅವರ ಹೆಸರು, ಪಂಜಾಬ್ನ ವಿಮಾನ ನಿಲ್ದಾಣಕ್ಕೆ ಸಂತ್ ರವಿದಾಸ್ ಅವರ ಹೆಸರು ಹಾಗೂ ಇದೀಗ ಭೋಗಾಪುರಂ ವಿಮಾನ ನಿಲ್ದಾಣಕ್ಕೆ ಅಳ್ಳೂರಿ ಸೀತಾರಾಮ ರಾಜು ಅವರ ಹೆಸರನ್ನು ಇಡಲಾಗಿದೆ” ಎಂದು ಹೇಳಿದರು.



