ನವದೆಹಲಿ: ಬಾಲಿವುಡ್ನಲ್ಲಿ ಕಂಗನಾ ರಣಾವತ್ ವಿರುದ್ಧ ಮತ್ತೊಂದು ವಾಗ್ವಾದ ಭುಗಿಲೆದ್ದಿದೆ. ಜೆನ್-ಝೀ ಪ್ರತಿಭಟನಾಕಾರರ ಬಗ್ಗೆ ಕಂಗನಾ ನೀಡಿದ್ದ ಹೇಳಿಕೆಯನ್ನು ಖಂಡಿಸಿರುವ ಮಾಜಿ ಸಂಸದೆ ಹಾಗೂ ನಟಿ ರಮ್ಯಾ, ಸಾಮಾಜಿಕ ಜಾಲತಾಣದಲ್ಲಿ ಕಂಗನಾ ವಿರುದ್ಧ ತೀವ್ರ ಟೀಕೆ ಮಾಡಿದ್ದಾರೆ.
“ಗೌರವದ ಬಗ್ಗೆ ಇತರರಿಗೆ ಪಾಠ ಮಾಡುವ ಮೊದಲು ನಿಮ್ಮ ಹಳೆಯ ಹೇಳಿಕೆಗಳನ್ನು ಒಮ್ಮೆ ನೆನಪಿಸಿಕೊಳ್ಳಿ. 2026ರ ಅತಿ ದೊಡ್ಡ ವ್ಯಂಗ್ಯವೆಂದರೆ ಕಂಗನಾ ರಣಾವತ್ ಜೆನ್-ಝೀಗೆ ಗೌರವದ ಉಪದೇಶ ನೀಡುತ್ತಿರುವುದು” ಎಂದು ರಮ್ಯಾ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.
ಅಲ್ಲದೆ, “ರಾಮ ನನ್ನ ಪಾಲಿಗೆ ದೇವರು. ರಾಮಮಂದಿರದ ವಿಚಾರದಲ್ಲಿ ನನ್ನ ಧಾರ್ಮಿಕ ಭಾವನೆಗಳಿಗೆ ನೋವಾಗಿದೆ. ಆಗ ನಿಮ್ಮ ಆಕ್ರೋಶ ಎಲ್ಲಿತ್ತು?” ಎಂದು ಪ್ರಶ್ನಿಸುವ ಮೂಲಕ ಕಂಗನಾ ಅವರ ನಿಲುವಿನಲ್ಲಿರುವ ದ್ವಂದ್ವವನ್ನು ರಮ್ಯಾ ಪ್ರಶ್ನಿಸಿದ್ದಾರೆ.
ಈ ಬೆಳವಣಿಗೆಯ ನಡುವೆ ಕಂಗನಾ ರಣಾವತ್ ಎಕ್ಸ್ನಲ್ಲಿ “ನಾನು ಜಾಗೃತ ಹಿಂದೂ ಆಗಲು ಬಯಸುತ್ತೇನೆ. ಮುಸ್ಲಿಮರನ್ನು ಭೇಟಿಯಾಗುವ ಹಿಂದೂಗಳು ಎಡಪಂಥೀಯರಾಗುತ್ತಿದ್ದಾರೆ” ಎಂದು ಪೋಸ್ಟ್ ಮಾಡಿದ್ದಾರೆ. ಈ ಹೇಳಿಕೆ ಜೆನ್-ಝೀ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದ ನಟಿ ಸೋನಾಕ್ಷಿ ಸಿನ್ಹಾ ಅವರನ್ನು ಪರೋಕ್ಷವಾಗಿ ಗುರಿಯಾಗಿಸಿಕೊಂಡದ್ದೇ ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.



