ಮೈಸೂರು: ಹಿರಿಯ ಶಾಸಕ ತನ್ವೀರ್ ಸೇಠ್ ಅವರಿಗೆ ಸಚಿವ ಸ್ಥಾನ ಕೈತಪ್ಪಲು ಮೈಸೂರಿನ ಮಾಜಿ ಮುಖ್ಯಮಂತ್ರಿ ಕೈವಾಡವಿದೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಪುತ್ರನ ರಾಜಕೀಯ ಪ್ರಭಾವ ಕಡಿಮೆಯಾಗುವ ಆತಂಕದಿಂದಲೇ ತನ್ವೀರ್ ಸೇಠ್ ಅವರನ್ನು ಸಚಿವ ಸಂಪುಟದಿಂದ ದೂರ ಇಡಲಾಗಿದೆ ಎಂದು ವಾಗ್ದಾಳಿ ನಡೆಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ತತ್ವ-ಸಿದ್ಧಾಂತಗಳಿಗೆ ಅನುಗುಣವಾಗಿ ಸಚಿವ ಸಂಪುಟ ರಚನೆಯಾಗಿದ್ದರೂ, ಹಿರಿಯ ನಾಯಕ ತನ್ವೀರ್ ಸೇಠ್ ಅವರಿಗೆ ಸಚಿವ ಸ್ಥಾನ ನೀಡಬೇಕಾಗಿತ್ತು. ಆದರೆ ಉದ್ದೇಶಪೂರ್ವಕವಾಗಿ ಅವರಿಗೆ ಅವಕಾಶ ನಿರಾಕರಿಸಲಾಗಿದೆ ಎಂದು ಆರೋಪಿಸಿದರು.
“ತನ್ವೀರ್ ಸೇಠ್ ಸಚಿವರಾದರೆ ತಮ್ಮ ಪುತ್ರನ ಪ್ರಭಾವ ಕುಗ್ಗುತ್ತದೆ ಎಂಬ ಕಾರಣಕ್ಕೆ ಅವರ ಸಚಿವ ಸ್ಥಾನ ತಪ್ಪಿಸಲಾಗಿದೆ. ವೈಯಕ್ತಿಕ ಸ್ವಾರ್ಥಕ್ಕಾಗಿ ಕರ್ನಾಟಕದ ರಾಜಕೀಯವನ್ನು ಹಾಳು ಮಾಡಲಾಗಿದೆ” ಎಂದು ಹೆಚ್. ವಿಶ್ವನಾಥ್ ಕಿಡಿಕಾರಿದರು.
ಇದೇ ವೇಳೆ ಸಚಿವರ ಪ್ರಮಾಣವಚನ ಸಮಾರಂಭಕ್ಕೂ ಮಾಜಿ ಮುಖ್ಯಮಂತ್ರಿ ಗೈರಾಗಿರುವುದನ್ನು ಟೀಕಿಸಿದ ಅವರು, “ಸಿದ್ದರಾಮಯ್ಯ ಅವರು ಸಮಾರಂಭಕ್ಕೆ ಹೋಗಬೇಕಿತ್ತು. ಆದರೆ ದುರಹಂಕಾರದ ನಿಲುವಿನಿಂದ ಭಾಗವಹಿಸಲಿಲ್ಲ” ಎಂದು ಹರಿಹಾಯ್ದರು.



