ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯು ಜನಹಿತ, ಅಭಿವೃದ್ಧಿ ಅಥವಾ ಉತ್ತಮ ಆಡಳಿತದ ಉದ್ದೇಶದಿಂದ ನಡೆದಿಲ್ಲ. ಅಧಿಕಾರದ ಹಂಚಿಕೆ, ಹಣಬಲ, ಗುಂಪುಗಾರಿಕೆ ಹಾಗೂ ಹೈಕಮಾಂಡ್ ರಾಜಕಾರಣದ ಫಲವಾಗಿ ಸಚಿವ ಸಂಪುಟ ವಿಸ್ತರಣೆ ನಡೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಕುರಿತು ಆರಂಭದಿಂದಲೂ “ರೇಟ್ ಫಿಕ್ಸ್ ಆಗದೇ ಡೇಟ್ ಫಿಕ್ಸ್ ಆಗಲಿಲ್ಲ” ಎಂದು ಹೇಳಿದ್ದೆ. ಇದೀಗ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು, ಮಾಜಿ ಸಚಿವರು ಹಾಗೂ ಶಾಸಕರು ನೀಡಿರುವ ಬಹಿರಂಗ ಹೇಳಿಕೆಗಳೇ ತಮ್ಮ ಆರೋಪಕ್ಕೆ ಪುಷ್ಟಿ ನೀಡಿವೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದೊಳಗಿನ ಅಸಮಾಧಾನವೇ ಸಚಿವ ಸಂಪುಟ ರಚನೆಯ ಹಿಂದಿನ ವಾಸ್ತವವನ್ನು ಬಯಲಿಗೆಳೆಯುತ್ತಿದೆ ಎಂದು ಟೀಕಿಸಿದ ವಿಜಯೇಂದ್ರ, ಹಿರಿಯ ಶಾಸಕ ತನ್ವೀರ್ ಸೇಠ್ ಅವರು ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರಿಗೂ ಸಚಿವ ಸ್ಥಾನ ನೀಡಲಾಗಿದೆ ಎಂದು ಆರೋಪಿಸಿರುವುದನ್ನು ಉಲ್ಲೇಖಿಸಿದರು.
ಅದೇ ರೀತಿ, ಮಾಜಿ ಸಚಿವ ಟಿ.ಬಿ. ಜಯಚಂದ್ರ ಅವರು “ನಾನು ಕಾಂಗ್ರೆಸಿಗ ಎಂದು ಹೇಳಿಕೊಳ್ಳಲು ನಾಚಿಕೆಯಾಗುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಶಾಸಕ ಎಸ್.ಆರ್. ಶ್ರೀನಿವಾಸ್ ಅವರು ಹಣ ನೀಡಲು ಸಾಧ್ಯವಾಗದ ಕಾರಣ ಸಚಿವ ಸ್ಥಾನ ಸಿಗಲಿಲ್ಲ ಎಂಬ ಅರ್ಥದಲ್ಲಿ ಹೇಳಿಕೆ ನೀಡಿದ್ದಾರೆ. ಮಾಜಿ ಸಚಿವ ಎಂ.ಸಿ. ಸುಧಾಕರ್ ಹಾಗೂ ಎಸ್.ಎನ್. ನಾರಾಯಣಸ್ವಾಮಿ ಸೇರಿದಂತೆ ಹಲವು ನಾಯಕರು ಅಸಮಾಧಾನ ವ್ಯಕ್ತಪಡಿಸಿರುವುದು ಕಾಂಗ್ರೆಸ್‌ನ ಆಂತರಿಕ ಪರಿಸ್ಥಿತಿಯನ್ನು ಬಹಿರಂಗಪಡಿಸಿದೆ ಎಂದು ಅವರು ಹೇಳಿದರು.
ಇದೇ ವೇಳೆ, ಮಾಜಿ ಸಚಿವ ಶಿವಾನಂದ ಪಾಟೀಲ ತಿಮ್ಮಾಪುರ್ ಅವರು ಕಾಂಗ್ರೆಸ್ ಹೈಕಮಾಂಡ್‌ಗೆ ಹಣ ನೀಡಿದವರು ಹಾಗೂ ಪ್ರಭಾವ ಹೊಂದಿದವರಿಗೆ ಮಾತ್ರ ಸಚಿವ ಸ್ಥಾನ ನೀಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಆರೋಪಗಳ ಕುರಿತು ಕಾಂಗ್ರೆಸ್ ನಾಯಕರು ರಾಜ್ಯದ ಜನತೆಗೆ ಸ್ಪಷ್ಟನೆ ನೀಡಬೇಕು ಎಂದು ಬಿ.ವೈ. ವಿಜಯೇಂದ್ರ ಆಗ್ರಹಿಸಿದರು.



