ಬೆಳಗಾವಿ: ಬೆಳಗಾವಿ ಜಿಲ್ಲೆಯ ರಾಮದುರ್ಗದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಹುಂಡಿ ಎಣಿಕೆ ವೇಳೆ ಪತ್ತೆಯಾದ ಹರಕೆ ಪತ್ರವೊಂದು ಈಗ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ದೇವರಲ್ಲಿ ಆಶೀರ್ವಾದ, ಆರೋಗ್ಯ ಅಥವಾ ಆರ್ಥಿಕ ಸಂಕಷ್ಟ ನಿವಾರಣೆಗೆ ಬೇಡುವ ಬದಲು, “ಒಬ್ಬ ಹುಡುಗಿಯಿಂದ ಕಾಪಾಡಿ” ಎಂದು ಭಕ್ತನೊಬ್ಬ ರಾಯರಿಗೆ ಮೊರೆ ಹೋಗಿರುವುದು ಗಮನ ಸೆಳೆದಿದೆ.
ಅನಾಮಧೇಯ ಭಕ್ತ ಬರೆದಿರುವ ಪತ್ರದಲ್ಲಿ “ಓಂ ಶ್ರೀ ರಾಘವೇಂದ್ರಾಯ ನಮಃ” ಎಂದು ಆರಂಭಿಸಿ, “ರಾಯರೇ ನಮ್ಮನ್ನು ಆ ಹುಡುಗಿಯಿಂದ ಕಾಪಾಡು. ಈ ಕಷ್ಟದಿಂದ ಪಾರು ಮಾಡು. ನಿಮ್ಮ ಮೇಲಿನ ನಂಬಿಕೆಯಿಂದ ನನ್ನ ನೋವನ್ನು ಹೇಳಿಕೊಳ್ಳುತ್ತಿದ್ದೇನೆ. ಆದಿಶಕ್ತಿ ದೇವಿ, ತಂದೆ-ತಾಯಿ ಕಾಪಾಡಲಿ” ಎಂದು ಮನವಿ ಮಾಡಲಾಗಿದೆ.
ಪತ್ರದಲ್ಲಿ “ಆ ವಿಷದಿಂದ ಕಾಪಾಡು” ಎಂಬ ಉಲ್ಲೇಖವೂ ಇದ್ದು, ಭಕ್ತ ಯಾವ ಸಂಕಷ್ಟವನ್ನು ಎದುರಿಸುತ್ತಿದ್ದಾನೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಪತ್ರದ ಕೊನೆಯಲ್ಲಿ “ಧನ್ಯವಾದಗಳು” ಎಂದು ಬರೆದು ತನ್ನ ಪ್ರಾರ್ಥನೆಯನ್ನು ಮುಗಿಸಿದ್ದಾನೆ.
ಪತ್ರದಲ್ಲಿ ಹೆಸರು ಅಥವಾ ವಿಳಾಸವಿಲ್ಲದ ಕಾರಣ ಭಕ್ತ ಯಾರು ಎಂಬುದು ಗೊತ್ತಾಗಿಲ್ಲ. ಆದರೂ ಈ ಅಪರೂಪದ ಹರಕೆ ಪತ್ರ ಮಠದ ಸಿಬ್ಬಂದಿ ಮತ್ತು ಭಕ್ತರಲ್ಲಿ ಆಶ್ಚರ್ಯ ಮೂಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.



