ದೇವನಹಳ್ಳಿ: ಸಾಮಾಜಿಕ ಜಾಲತಾಣದಲ್ಲಿ ‘ವರ್ಕ್ ಫ್ರಂ ಹೋಂ’ ಹೆಸರಿನಲ್ಲಿ ಉದ್ಯೋಗದ ಕನಸು ತೋರಿಸಿ ಲಕ್ಷಾಂತರ ರೂಪಾಯಿ ಡೆಪಾಸಿಟ್ ಪಡೆದು ಸಾರ್ವಜನಿಕರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದ ದಂಪತಿಯನ್ನು ದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ‘ಕಾಳಿಕಾ ದೇವಿ ಎಂಟರ್‌ಪ್ರೈಸಸ್’ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಿರಣ್ ಮತ್ತು ಆರತಿ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ.
ಇನ್‌ಸ್ಟಾಗ್ರಾಂ ರೀಲ್ಸ್ ಮೂಲಕ ಮೇಣದ ಬತ್ತಿ, ಡ್ರೈ ಫ್ರೂಟ್ಸ್ ಹಾಗೂ ಅಗರಬತ್ತಿ ಪ್ಯಾಕಿಂಗ್ ಕೆಲಸ ನೀಡುವುದಾಗಿ ಹೇಳುತ್ತಿದ್ದ ಕಿರಣ್, ಒಂದು ಲಕ್ಷ ರೂಪಾಯಿ ಡೆಪಾಸಿಟ್ ಮಾಡಿದರೆ ತಿಂಗಳಿಗೆ 23 ಸಾವಿರ ರೂಪಾಯಿ ಆದಾಯ ಸಿಗುತ್ತದೆ ಎಂದು ಜನರನ್ನು ನಂಬಿಸುತ್ತಿದ್ದ.
ಈ ಮಾತುಗಳನ್ನು ನಂಬಿದ ನೂರಾರು ಜನರು 2 ಲಕ್ಷದಿಂದ 20 ಲಕ್ಷ ರೂಪಾಯಿವರೆಗೆ ಹಣ ಹೂಡಿಕೆ ಮಾಡಿದ್ದರು. ಆದರೆ ಹಣ ಪಡೆದ ಬಳಿಕ ಯಾವುದೇ ಕೆಲಸ ನೀಡದೆ, ಠೇವಣಿ ಹಣವನ್ನೂ ಹಿಂತಿರುಗಿಸದೆ ದಂಪತಿ ತಲೆಮರೆಸಿಕೊಂಡಿದ್ದರು.
ದೇವನಹಳ್ಳಿ, ದೊಡ್ಡಬಳ್ಳಾಪುರ, ಚಿಕ್ಕಜಾಲ, ಕೋಲಾರ ಸೇರಿದಂತೆ ವಿವಿಧ ಭಾಗಗಳ ಸಂತ್ರಸ್ತರು ದೇವನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಎಫ್‌ಐಆರ್ ದಾಖಲಿಸಿಕೊಂಡ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಸಾರ್ವಜನಿಕರಿಂದ ಸಂಗ್ರಹಿಸಲಾದ ಹಣದ ಮೂಲ, ಹಣದ ವರ್ಗಾವಣೆ ಹಾಗೂ ವಂಚನೆಯ ಜಾಲದ ಕುರಿತು ಪೊಲೀಸರು ಸವಿಸ್ತಾರ ತನಿಖೆ ನಡೆಸುತ್ತಿದ್ದಾರೆ.



