ಬೆಂಗಳೂರು: ವೈದ್ಯಕೀಯ, ದಂತ ವೈದ್ಯಕೀಯ ಹಾಗೂ ಫಾರ್ಮಸಿ ಕೋರ್ಸ್ಗಳ ಪ್ರವೇಶಕ್ಕಾಗಿ ಅಭ್ಯರ್ಥಿಗಳಿಂದ ಆಯ್ಕೆ ದಾಖಲಿಸುವ ಪ್ರಕ್ರಿಯೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇಂದಿನಿಂದ ಆರಂಭಿಸಿದೆ.
ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಅವರ ಮಾಹಿತಿ ಪ್ರಕಾರ, ಆಗಸ್ಟ್ 13ರವರೆಗೆ ಅಭ್ಯರ್ಥಿಗಳಿಗೆ ಆದ್ಯತಾ ಕ್ರಮದಲ್ಲಿ ಆಪ್ಷನ್ಸ್ ದಾಖಲಿಸಲು ಅವಕಾಶ ನೀಡಲಾಗಿದೆ.
ಇಂಜಿನಿಯರಿಂಗ್ ಸೇರಿದಂತೆ ಇತರೆ ಸಿಇಟಿ ಕೋರ್ಸ್ಗಳಿಗೆ ಈಗಾಗಲೇ ಆಪ್ಷನ್ಸ್ ದಾಖಲಿಸಿರುವ ಅಭ್ಯರ್ಥಿಗಳಿಗೂ ಹೊಸದಾಗಿ ಆಪ್ಷನ್ ಸೇರಿಸಲು, ಬದಲಾಯಿಸಲು ಅಥವಾ ತೆಗೆದುಹಾಕಲು ಇದೇ ಮೊದಲ ಬಾರಿಗೆ ಅವಕಾಶ ನೀಡಲಾಗಿದೆ.
ಸೀಟ್ ಮ್ಯಾಟ್ರಿಕ್ಸ್, ಶುಲ್ಕ ವಿವರ ಪ್ರಕಟ:
ವೈದ್ಯಕೀಯ, ದಂತ ವೈದ್ಯಕೀಯ ಹಾಗೂ ಫಾರ್ಮಸಿ ಕೋರ್ಸ್ಗಳ ಸೀಟ್ ಮ್ಯಾಟ್ರಿಕ್ಸ್ ಮತ್ತು ಶುಲ್ಕದ ವಿವರಗಳನ್ನು ಕೆಇಎ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. ಅಭ್ಯರ್ಥಿಗಳು ಈ ಮಾಹಿತಿಯನ್ನು ಪರಿಶೀಲಿಸಿ ಎಚ್ಚರಿಕೆಯಿಂದ ಆಪ್ಷನ್ಸ್ ದಾಖಲಿಸುವಂತೆ ಕೆಇಎ ಸೂಚಿಸಿದೆ.
ಆಯುಷ್ ಕೋರ್ಸ್ಗಳ ಸೀಟ್ ಮ್ಯಾಟ್ರಿಕ್ಸ್ ಇನ್ನೂ ಪ್ರಕಟವಾಗದ ಕಾರಣ, ಆ ಕೋರ್ಸ್ಗಳಿಗೆ ಸದ್ಯಕ್ಕೆ ಆಪ್ಷನ್ ದಾಖಲಿಸಲು ಅವಕಾಶ ನೀಡಲಾಗಿಲ್ಲ ಎಂದು ಕೆಇಎ ತಿಳಿಸಿದೆ.
ದಾಖಲೆ ಪರಿಶೀಲನೆಗೆ ಅವಕಾಶ:
ಇದುವರೆಗೆ ದಾಖಲೆ ಪರಿಶೀಲನೆ ಮಾಡಿಸಿಕೊಳ್ಳದ ಅಭ್ಯರ್ಥಿಗಳು ಶನಿವಾರವೂ ಕೆಇಎ ಕಚೇರಿಗೆ ಭೇಟಿ ನೀಡಿ ದಾಖಲೆ ಪರಿಶೀಲನೆ ಮಾಡಿಸಿಕೊಳ್ಳಬಹುದು. ಬಳಿಕ ವೆರಿಫಿಕೇಷನ್ ಸ್ಲಿಪ್ ಡೌನ್ಲೋಡ್ ಮಾಡಿಕೊಂಡು ಆಪ್ಷನ್ಸ್ ದಾಖಲಿಸಬಹುದು ಎಂದು ತಿಳಿಸಲಾಗಿದೆ.
ಪ್ರಕ್ರಿಯೆಯಿಂದ ಹೊರಗುಳಿದವರಿಗೂ ಅವಕಾಶ:
ಚಾಯ್ಸ್-4 ದಾಖಲಿಸಿ ಪ್ರಕ್ರಿಯೆಯಿಂದ ಹೊರಬಂದಿರುವ ಅಭ್ಯರ್ಥಿಗಳು ಹಾಗೂ ಮೊದಲ ಸುತ್ತಿನಲ್ಲಿ ಸೀಟ್ ಹಂಚಿಕೆಯಾದ ಬಳಿಕ ಯಾವುದೇ ಚಾಯ್ಸ್ ದಾಖಲಿಸದ ಅಭ್ಯರ್ಥಿಗಳಿಗೂ ಮತ್ತೆ ಕೌನ್ಸೆಲಿಂಗ್ ಪ್ರಕ್ರಿಯೆಗೆ ಸೇರಲು ಅವಕಾಶ ನೀಡಲಾಗಿದೆ.
ಇದಕ್ಕಾಗಿ ಅಭ್ಯರ್ಥಿಗಳು ₹750 ಶುಲ್ಕ ಪಾವತಿಸಿ ಮತ್ತೆ ಪ್ರವೇಶ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು ಎಂದು ಕೆಇಎ ತಿಳಿಸಿದೆ.



