HomeKarnataka Newsನಿನ್ನೆ ಕ್ಲಾಸ್... ಇಂದು ಸಮಾಧಾನ! ಕಣ್ಣೀರಿಟ್ಟ ಚೇತನಾ ಪಾಟೀಲಗೆ ರಾಯರಡ್ಡಿ ಧೈರ್ಯ

ನಿನ್ನೆ ಕ್ಲಾಸ್… ಇಂದು ಸಮಾಧಾನ! ಕಣ್ಣೀರಿಟ್ಟ ಚೇತನಾ ಪಾಟೀಲಗೆ ರಾಯರಡ್ಡಿ ಧೈರ್ಯ

For Dai;y Updates Join Our whatsapp Group

ಗದಗ: ಬರ ಪರಿಸ್ಥಿತಿ ವರದಿಯಲ್ಲಿ ಲೋಪ ಕಂಡು ನಿನ್ನೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ, ಇಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಚೇತನಾ ಪಾಟೀಲ ಅವರಿಗೆ ಸಮಾಧಾನ ಹೇಳಿ ಧೈರ್ಯ ತುಂಬಿದರು.

ಗದಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದಿದ್ದ ಬರ ಪರಿಸ್ಥಿತಿ ಪರಿಶೀಲನಾ ಸಭೆಯಲ್ಲಿ ಬೆಳೆ ಅಂಕಿ-ಅಂಶಗಳ ಕುರಿತು ಅಧಿಕಾರಿಗಳಿಂದ ಸ್ಪಷ್ಟ ಮಾಹಿತಿ ಬಾರದ ಹಿನ್ನೆಲೆಯಲ್ಲಿ ಸಚಿವರು ಗರಂ ಆಗಿದ್ದರು. ಈ ವೇಳೆ ಕೃಷಿ ಜಂಟಿ ನಿರ್ದೇಶಕಿ ಚೇತನಾ ಪಾಟೀಲ ಭಾವುಕರಾಗಿ ಸಭೆಯಲ್ಲೇ ಕಣ್ಣೀರು ಹಾಕಿದ್ದರು.

ಈ ಬೆಳವಣಿಗೆ ಹಿನ್ನೆಲೆಯಲ್ಲಿ ಶನಿವಾರ ಶಿರಹಟ್ಟಿ ಪಟ್ಟಣದ ತಾಲೂಕು ಪಂಚಾಯತ್ ಕಚೇರಿಯಲ್ಲಿ ನಡೆದ ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕುಗಳ ಬರ ಪರಿಸ್ಥಿತಿ ಅವಲೋಕನ ಸಭೆಗೂ ಮುನ್ನವೇ ಸಚಿವ ರಾಯರಡ್ಡಿ ಅವರು ಚೇತನಾ ಪಾಟೀಲ ಸೇರಿದಂತೆ ಅಧಿಕಾರಿಗಳೊಂದಿಗೆ ಮಾತನಾಡಿ ಸಮಾಧಾನಪಡಿಸಿದರು.

ಬೇಜಾರು ಮಾಡಿಕೊಳ್ಳಬೇಡಿ

ಸಭೆ ಆರಂಭಕ್ಕೂ ಮುನ್ನ ಚೇತನಾ ಪಾಟೀಲ ಅವರಿಗೆ ಧೈರ್ಯ ತುಂಬಿದ ಸಚಿವರು, “ನಾನು ವರದಿ ಕೇಳಿದ್ದು ಸ್ಪಷ್ಟತೆ ಇರಲಿ ಎಂದು ಹೇಳಿದ್ದೇನೆ. ಯಾರೂ ಬೇಜಾರು ಮಾಡಿಕೊಳ್ಳಬೇಡಿ. ನಾವೆಲ್ಲರೂ ಒಂದು ತಂಡವಾಗಿ ಸಾರ್ವಜನಿಕರ ಪರವಾಗಿ ಕೆಲಸ ಮಾಡಬೇಕು” ಎಂದು ಹೇಳಿದರು.

ಅಧಿಕಾರಿಗಳು ತಮ್ಮ ಇಲಾಖೆಗೆ ಸಂಬಂಧಿಸಿದಂತೆ ಸರಿಯಾದ ಹಾಗೂ ನಿಖರ ಮಾಹಿತಿಯೊಂದಿಗೆ ಸಭೆಗೆ ಬರಬೇಕು ಎಂದು ಮತ್ತೊಮ್ಮೆ ತಾಕೀತು ಮಾಡಿದ ಸಚಿವರು, ತಪ್ಪು ಮಾಹಿತಿ ಬಂದಾಗ ಅದನ್ನು ಪ್ರಶ್ನಿಸುವುದು ಅನಿವಾರ್ಯವಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ನಾನು ಟಫ್‌ ಮ್ಯಾನ್‌…

ಈ ವೇಳೆ ತಮ್ಮ ಕಾರ್ಯವೈಖರಿ ಕುರಿತು ಮಾತನಾಡಿದ ರಾಯರಡ್ಡಿ, “ನಾನೊಬ್ಬ ಟಫ್‌ ಮ್ಯಾನ್‌. ನನ್ನ ಭಾಷೆ ಸ್ವಲ್ಪ ಹಾರ್ಡ್‌ ಇದೆ. ಆದರೆ ನಾನು ಅಸಂವಿಧಾನಿಕ ಪದ ಬಳಸುವುದಿಲ್ಲ. ನಾವೆಲ್ಲರೂ ಪಬ್ಲಿಕ್‌ ಸರ್ವೆಂಟ್‌ಗಳು. ನೀವು ನೀಟಾಗಿ ಕೆಲಸ ಮಾಡಿ. ನಾವೆಲ್ಲರೂ ಸಾರ್ವಜನಿಕರ ಪರವಾಗಿ ಕೆಲಸ ಮಾಡುವವರು” ಎಂದರು.

“ನೀವು ಗುಡ್‌ ಆಫೀಸರ್‌ ಆಗಿದ್ದರೆ ಮಾಹಿತಿ ಸರಿಯಾಗಿ ಕೊಡಿ. ನಾನು ಹಲವಾರು ಹುದ್ದೆಗಳನ್ನು ಅನುಭವಿಸಿದ್ದೇನೆ. ಅಧಿಕಾರಿಗಳಿಂದ ನಿಖರ ಮಾಹಿತಿ ನಿರೀಕ್ಷಿಸುವುದು ಸಹಜ” ಎಂದು ಸಚಿವರು ಹೇಳಿದರು.

ನಿನ್ನೆ ನಡೆದ ಸಭೆಯಲ್ಲಿ ಕೃಷಿ ಇಲಾಖೆಯ ಬೆಳೆ ಅಂಕಿ-ಅಂಶಗಳ ಕುರಿತು ಅಸಮಾಧಾನಗೊಂಡಿದ್ದ ಸಚಿವರು, ಕೃಷಿ ಇಲಾಖೆಯ ಬೆಳೆಯನ್ನು ತೋಟಗಾರಿಕೆ ವಿಭಾಗದಲ್ಲಿ ನಮೂದಿಸಿರುವುದು ಸೇರಿದಂತೆ ಹಲವು ಲೋಪಗಳನ್ನು ಪ್ರಶ್ನಿಸಿದ್ದರು. ಸಚಿವರ ಕಠಿಣ ಮಾತುಗಳಿಂದ ಚೇತನಾ ಪಾಟೀಲ ಭಾವುಕರಾಗಿ ಕಣ್ಣೀರು ಹಾಕಿದ್ದರು. ಆದರೆ, “ಕಠಿಣವಾಗಿ ಮಾತನಾಡಿದ್ದು ಕೆಲಸದ ಮೇಲಿನ ಕಾಳಜಿಯಿಂದ, ವೈಯಕ್ತಿಕವಾಗಿ ಯಾರನ್ನೂ ನೋಯಿಸುವ ಉದ್ದೇಶವಿಲ್ಲ” ಎಂಬ ಸಂದೇಶವನ್ನು ಇಂದು ಸಚಿವರು ನೀಡುವ ಮೂಲಕ ಹಿಂದಿನ ಬೆಳವಣಿಗೆಗೆ ಸ್ಪಷ್ಟನೆ ನೀಡಿದರು.

ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕುಗಳ ಬರ ಪರಿಸ್ಥಿತಿ, ಬೆಳೆ ಹಾನಿ, ಮಳೆ ಕೊರತೆ, ಕುಡಿಯುವ ನೀರು ಹಾಗೂ ರೈತರ ಸಮಸ್ಯೆಗಳ ಕುರಿತು ಸಭೆಯಲ್ಲಿ ಅಧಿಕಾರಿಗಳಿಂದ ಸಚಿವರು ಮಾಹಿತಿ ಪಡೆದುಕೊಂಡರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img