ಶಿವಮೊಗ್ಗ: ಮಲೆನಾಡಿನಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ಶಿಕಾರಿಪುರ ತಾಲೂಕಿನ ಪ್ರಮುಖ ಜಲಮೂಲವಾಗಿರುವ ಅಂಬ್ಲಿಗೋಳ ಜಲಾಶಯ ಭರ್ತಿಯಾಗಿ ಕೋಡಿ ಬಿದ್ದಿದೆ. ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಜಲಾಶಯಕ್ಕೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದ್ದಾರೆ.
ಜಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಸಂತಸ ವ್ಯಕ್ತಪಡಿಸಿರುವ ಬಿ.ವೈ. ರಾಘವೇಂದ್ರ, ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿರುವುದಾಗಿ ಎಕ್ಸ್‌ನಲ್ಲಿ ತಿಳಿಸಿದ್ದಾರೆ.
ವರುಣದೇವನ ಕೃಪೆಯಿಂದ ಶಿಕಾರಿಪುರ ತಾಲೂಕು ಮಾತ್ರವಲ್ಲದೆ ಇಡೀ ಶಿವಮೊಗ್ಗ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಸಮೃದ್ಧಿಯಾಗಲಿ. ರೈತ ಕುಟುಂಬಗಳಲ್ಲಿ ಸುಖ, ಶಾಂತಿ ಮತ್ತು ಸಂತಸ ನೆಲೆಸಲಿ ಎಂದು ಅವರು ಪ್ರಾರ್ಥಿಸಿದ್ದಾರೆ.
ಬಾಗಿನ ಅರ್ಪಣೆ ಬಳಿಕ ಬಿ.ವೈ. ವಿಜಯೇಂದ್ರ ಹಾಗೂ ಬಿ.ವೈ. ರಾಘವೇಂದ್ರ ಅವರು ಶಿಕಾರಿಪುರ ಪಟ್ಟಣದ ಶ್ರೀ ಹುಚ್ಚುರಾಯ ಸ್ವಾಮಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.



