‘ಟಾಕ್ಸಿಕ್’ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿ ಭರ್ಜರಿ ಪ್ರತಿಕ್ರಿಯೆ ಪಡೆಯುತ್ತಿರುವ ಬೆನ್ನಲ್ಲೇ ನಟಿ ರಿಷಿಕಾ ಸಿಂಗ್ ನೀಡಿರುವ ಹೇಳಿಕೆ ಹೊಸ ವಿವಾದಕ್ಕೆ ಕಾರಣವಾಗಿದೆ. ಟ್ರೈಲರ್ನ್ನು ಟೀಕಿಸಿದ ರಿಷಿಕಾ, ಯಶ್ ಅವರನ್ನು ಉದ್ದೇಶಿಸಿ ‘ಹೆಣ್ಮಕ್ಕಳಿಗೆ ಗೌರವ ಕೊಡದಿದ್ದರೆ ಕರ್ನಾಟಕದಿಂದ ಜಾಗ ಖಾಲಿ ಮಾಡಿಸ್ತೀವಿ’ ಎಂದು ಹೇಳಿರುವ ವಿಡಿಯೋ ವೈರಲ್ ಆಗಿದ್ದು, ಅಭಿಮಾನಿಗಳು ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ.
ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಸಿನಿಮಾದ ಪ್ರಮುಖ ನಟಿಯರು ಯಶ್ ಜೊತೆ ಕೆಲಸ ಮಾಡಿದ ಅನುಭವವನ್ನು ಶ್ಲಾಘಿಸಿದ್ದರು. ಟ್ರೈಲರ್ಗೆ ಕೂಡ ಪ್ರೇಕ್ಷಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು.
ಈ ನಡುವೆ ನಟಿ ರಿಷಿಕಾ ಸಿಂಗ್ ತಮ್ಮ ವಿಡಿಯೋದಲ್ಲಿ ಟ್ರೈಲರ್ ಹಾಗೂ ಯಶ್ ಅವರ ಪಾತ್ರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೆಣ್ಮಕ್ಕಳಿಗೆ ಗೌರವ ನೀಡುವಂತೆ ಸಲಹೆ ನೀಡಿದ ಅವರು, ತಮ್ಮ ಹೇಳಿಕೆಯ ಕೊನೆಯಲ್ಲಿ ‘ಐ ಆಮ್ ಟಾಕ್ಸಿಕ್’ ಎಂದು ಹೇಳಿದ್ದಾರೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ತೀವ್ರ ಚರ್ಚೆ ಆರಂಭಿಸಿದ್ದಾರೆ. ‘ಸಿನಿಮಾದಲ್ಲಿ ನಟಿಸಿರುವ ನಟಿಯರೇ ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ. ವೃತ್ತಿಪರವಾಗಿ ಕೆಲಸ ಮಾಡಿದ್ದಾರೆ. ಹಾಗಿದ್ದಾಗ ಈ ರೀತಿಯ ಟೀಕೆ ಏಕೆ?’ ಎಂದು ಹಲವರು ಪ್ರಶ್ನಿಸಿದ್ದಾರೆ.
ಕೆಲವರು ರಿಷಿಕಾ ಅವರ ಹಳೆಯ ಸಿನಿಮಾಗಳ ದೃಶ್ಯಗಳು ಮತ್ತು ಫೋಟೋಗಳನ್ನು ಹಂಚಿಕೊಂಡು ಪ್ರತಿಕ್ರಿಯೆ ನೀಡಿದ್ದು, ಅವರ ಹೇಳಿಕೆಯನ್ನು ದ್ವಂದ್ವ ನಿಲುವು ಎಂದು ಟೀಕಿಸಿದ್ದಾರೆ. ಯಶ್ ಅಭಿಮಾನಿಗಳು ಕೂಡ ನಟಿಯ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಿಷಿಕಾ ಸಿಂಗ್ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಪುತ್ರಿಯಾಗಿದ್ದು, ‘ಕಂಠೀರವ’, ‘ಕಳ್ಳ ಮಳ್ಳ ಸುಳ್ಳ’, ‘ಬೆಂಕಿ ಬಿರುಗಾಳಿ’, ‘ತುಂಟರು’ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದ ಮೊದಲ ‘ಬಿಗ್ಬಾಸ್’ ಸೀಸನ್ನಲ್ಲೂ ಅವರು ಸ್ಪರ್ಧಿಯಾಗಿದ್ದರು.



