ನಟಿ ತ್ರಿಷಾ ಅವರನ್ನು ಸುತ್ತುವರಿದ ರಾಜಕೀಯ ವಿವಾದಗಳು ಸದ್ಯ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಯ ಬೆನ್ನಲ್ಲೇ ಇದೀಗ ಎಐಎಡಿಎಂಕೆ ಮುಖಂಡ ಆರ್.ಬಿ. ಉದಯಕುಮಾರ್ ನೀಡಿರುವ ಹೇಳಿಕೆ ಹೊಸ ಚರ್ಚೆಗೆ ಕಾರಣವಾಗಿದ್ದು, ತ್ರಿಷಾ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮಿಳುನಾಡು ಸರ್ಕಾರದ ವಿರುದ್ಧ ಮಾತನಾಡುತ್ತಿದ್ದ ವೇಳೆ ಆರ್.ಬಿ. ಉದಯಕುಮಾರ್, ಸಿನಿಮಾ ಕ್ಷೇತ್ರದವರನ್ನು ಉನ್ನತ ಹುದ್ದೆಗಳಿಗೆ ನೇಮಕ ಮಾಡುತ್ತಿರುವುದನ್ನು ಟೀಕಿಸಿದರು. ಇದೇ ವೇಳೆ “ತ್ರಿಷಾ ತಮಿಳುನಾಡಿನ ಡಿಸಿಎಂ ಆಗುವುದನ್ನು ಕಾಯುತ್ತಿದ್ದೇವೆ” ಎಂದು ವ್ಯಂಗ್ಯವಾಗಿ ಹೇಳಿದರು.
ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ವಿಜಯ್ ವಿರುದ್ಧದ ರಾಜಕೀಯ ಟೀಕೆಗೆ ತ್ರಿಷಾ ಹೆಸರನ್ನು ಬಳಸುವುದು ಏಕೆ ಎಂಬ ಪ್ರಶ್ನೆಗಳು ಕೇಳಿಬಂದಿವೆ.
ತ್ರಿಷಾ ಅಭಿಮಾನಿಗಳು ಚೆನ್ನೈ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪೋಸ್ಟರ್‌ಗಳನ್ನು ಅಂಟಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ. ನಟಿಯ ಹೆಸರನ್ನು ಪದೇಪದೆ ರಾಜಕೀಯಕ್ಕೆ ಎಳೆಯುವುದನ್ನು ತಕ್ಷಣ ನಿಲ್ಲಿಸಬೇಕು. ಇಲ್ಲವಾದರೆ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಇತ್ತೀಚೆಗೆ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಯೂ ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಮತ್ತೊಮ್ಮೆ ತ್ರಿಷಾ ಹೆಸರು ರಾಜಕೀಯ ಚರ್ಚೆಯಲ್ಲಿ ಕೇಳಿಬಂದಿರುವುದು ಸಿನಿ ಹಾಗೂ ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ.
ತ್ರಿಷಾ ಮತ್ತು ವಿಜಯ್ ಹಲವು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದು, ಅವರ ಜೋಡಿ ಪ್ರೇಕ್ಷಕರಲ್ಲಿ ಜನಪ್ರಿಯವಾಗಿದೆ. ಆದರೆ ಅವರ ವೈಯಕ್ತಿಕ ಸಂಬಂಧ ಹಾಗೂ ಭವಿಷ್ಯದ ಬಗ್ಗೆ ಹರಿದಾಡುತ್ತಿರುವ ಊಹಾಪೋಹಗಳಿಗೆ ಯಾವುದೇ ಅಧಿಕೃತ ದೃಢೀಕರಣ ಲಭ್ಯವಿಲ್ಲ.



