ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯ ಹುಲಕೋಟಿಯ ಶ್ರೀ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆ.13ರಂದು ಪದವಿ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲೊಂದಾದ ಯುವನಿಧಿ ಯೋಜನೆ ಕುರಿತು ಅರಿವು ಹಾಗೂ ವೃತ್ತಿಮಾರ್ಗದರ್ಶನ ಕಾರ್ಯಕ್ರಮ ನಡೆಯಿತು.
ಗದಗ ಜಿಲ್ಲಾ ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ ಹಾಗೂ ಗದಗ ತಾಲೂಕು ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಯುವನಿಧಿ ಯೋಜನೆಯ ಸದುಪಯೋಗ ಪಡೆದುಕೊಂಡು ಭವಿಷ್ಯ ರೂಪಿಸಿಕೊಳ್ಳುವ ಕುರಿತು ಮಾರ್ಗದರ್ಶನ ನೀಡಲಾಯಿತು.
ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಅಧಿಕಾರಿಗಳು ಯೋಜನೆಯ ಅರ್ಹತೆ, ನೋಂದಣಿ ಹಾಗೂ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. 2023ರಿಂದ ಪದವಿ ಅಥವಾ ಡಿಪ್ಲೊಮಾ ಪೂರ್ಣಗೊಳಿಸಿರುವ, ಕನಿಷ್ಠ ಆರು ತಿಂಗಳ ಕಾಲ ಉದ್ಯೋಗವಿಲ್ಲದಿರುವ ಅರ್ಹ ಅಭ್ಯರ್ಥಿಗಳಿಗೆ ಯುವನಿಧಿ ಯೋಜನೆಯಡಿ ನಿರುದ್ಯೋಗ ಭತ್ಯೆ ನೀಡಲಾಗುತ್ತದೆ.
ಪದವೀಧರರಿಗೆ ತಿಂಗಳಿಗೆ ₹3,000 ಹಾಗೂ ಡಿಪ್ಲೊಮಾ ಅಭ್ಯರ್ಥಿಗಳಿಗೆ ₹1,500 ಭತ್ಯೆ ದೊರೆಯಲಿದ್ದು, ಗರಿಷ್ಠ ಎರಡು ವರ್ಷಗಳವರೆಗೆ ಸೌಲಭ್ಯ ಪಡೆಯಬಹುದು. ಅರ್ಹರು ಸೇವಾ ಸಿಂಧು ಪೋರ್ಟಲ್ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಲಾಯಿತು.
ಕಾಲೇಜಿನ ಪ್ರಾಚಾರ್ಯ ಅಪ್ಪಣ್ಣ ಹಂಜಿ, ಸಹಾಯಕ ಉದ್ಯೋಗಾಧಿಕಾರಿ ಎಚ್ಚರಪ್ಪ ಬಡಿಗೇರ, ಆಪ್ತ ಸಮಾಲೋಚಕ ಆನಂದ ಹೊಂಬಳ ಸೇರಿದಂತೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



