ಶಿವಮೊಗ್ಗ: ಮನೆಯ ಹಿಂದಿನ ಬಾಳೆ ಗಿಡದಲ್ಲಿದ್ದ ಕಡಜದ ಗೂಡಿನಿಂದ ದಾಳಿ ನಡೆಸಿದ ಪರಿಣಾಮ 8 ವರ್ಷದ ಬಾಲಕ ಮೃತಪಟ್ಟಿರುವ ದುರ್ಘಟನೆ ಸಾಗರ ತಾಲೂಕಿನ ಹೆಗ್ಗೋಡು ಬಳಿಯ ಅತ್ತಿಸರದಲ್ಲಿ ನಡೆದಿದೆ.
ಮೃತ ಬಾಲಕನನ್ನು ನಿಶ್ಚಿತ್ (8) ಎಂದು ಗುರುತಿಸಲಾಗಿದೆ. ಆತ 2ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಮನೆಯ ಹಿಂದಿನ ಬಾಳೆ ಗಿಡದಲ್ಲಿ ಕಡಜದ ಹುಳುವಿನ ಗೂಡು ಇತ್ತು ಎನ್ನಲಾಗಿದೆ. ಈ ವೇಳೆ ಬಾಲಕ ನಿಶ್ಚಿತ್ ಹಾಗೂ ಆತನ ತಂದೆ ವೆಂಕಟೇಶ್ ಮೇಲೆ ಕಡಜದ ಹುಳುಗಳು ದಾಳಿ ನಡೆಸಿವೆ.
ದಾಳಿಯಿಂದ ಗಾಯಗೊಂಡ ತಂದೆ-ಮಗನನ್ನು ತಕ್ಷಣ ಹೆಗ್ಗೋಡು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಇಬ್ಬರನ್ನೂ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ನಿಶ್ಚಿತ್ ಮೃತಪಟ್ಟಿದ್ದಾನೆ. ತಂದೆ ವೆಂಕಟೇಶ್ ಅವರಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಘಟನೆ ಸಾಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.



