HomeCrime Newsಆಟೋ ಬಳಿ ನಾಯಿ ಮೂತ್ರ ವಿಸರ್ಜನೆ ಮಾಡಿದ್ದಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ!

ಆಟೋ ಬಳಿ ನಾಯಿ ಮೂತ್ರ ವಿಸರ್ಜನೆ ಮಾಡಿದ್ದಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ!

For Dai;y Updates Join Our whatsapp Group

ಹೈದರಾಬಾದ್: ಸಾಕು ನಾಯಿ ಆಟೋ ಬಳಿ ಮೂತ್ರ ವಿಸರ್ಜನೆ ಮಾಡಿದ್ದಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ತೆಲಂಗಾಣದ ಖಮ್ಮಂ ನಗರದಲ್ಲಿ ನಡೆದಿದೆ. ಘಟನೆಯಲ್ಲಿ 23 ವರ್ಷದ ಯುವಕನೊಬ್ಬ ಮೃತಪಟ್ಟಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೃತ ಯುವಕನನ್ನು ಉಂಡೇಟಿ ಶ್ರೀನಾಥ್‌ (23) ಎಂದು ಗುರುತಿಸಲಾಗಿದೆ. ಶ್ರೀನಾಥ್‌ ಡೆಕೊರೇಷನ್‌ ಸಂಬಂಧಿತ ಕೆಲಸ ಮಾಡುತ್ತಿದ್ದರು.

ಆಗಸ್ಟ್‌ 13ರಂದು ರಾತ್ರಿ 10.30ರ ಸುಮಾರಿಗೆ ಶ್ರೀನಾಥ್‌ ತಮ್ಮ ಸ್ನೇಹಿತ ವೀರೇಶ್‌ ಜೊತೆ ಆಟೋದಲ್ಲಿ ಕುಳಿತಿದ್ದರು. ಇದೇ ವೇಳೆ ಸ್ಥಳೀಯ ನಿವಾಸಿ ವೆಮುಲ ಮಧು (28) ತನ್ನ ಸಾಕು ನಾಯಿಯನ್ನು ವಾಕಿಂಗ್‌ಗೆ ಕರೆದುಕೊಂಡು ಬಂದಿದ್ದ.

ಈ ಸಂದರ್ಭದಲ್ಲಿ ಸಾಕು ನಾಯಿ ಶ್ರೀನಾಥ್‌ ಹಾಗೂ ವೀರೇಶ್‌ ಕುಳಿತಿದ್ದ ಆಟೋ ಸಮೀಪ ಮೂತ್ರ ವಿಸರ್ಜನೆ ಮಾಡಿದ್ದಲ್ಲದೆ, ಅವರತ್ತ ಬೊಗಳಿದೆ ಎನ್ನಲಾಗಿದೆ. ಇದನ್ನು ಪ್ರಶ್ನಿಸಿದ ಶ್ರೀನಾಥ್‌ ಹಾಗೂ ಮಧು ನಡುವೆ ಮಾತಿನ ಚಕಮಕಿ ನಡೆದಿದೆ.

ನಂತರ ಜಗಳ ಮತ್ತಷ್ಟು ವಿಕೋಪಕ್ಕೆ ತಿರುಗಿದ್ದು, ಶ್ರೀನಾಥ್‌ ಮತ್ತು ವೀರೇಶ್‌ ಮಧುವಿನ ಮನೆ ಕಡೆಗೆ ತೆರಳಿದ್ದಾರೆ. ಅಲ್ಲಿ ಮತ್ತೆ ಇಬ್ಬರ ನಡುವೆ ಗಲಾಟೆ ನಡೆದಿದ್ದು, ದೊಣ್ಣೆಗಳಿಂದ ಹೊಡೆದಾಟ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವೇಳೆ ಮಧು ಮನೆಯೊಳಗೆ ತೆರಳಿ ತರಕಾರಿ ಕತ್ತರಿಸಲು ಬಳಸುವ ಚಾಕುವನ್ನು ತಂದು ಶ್ರೀನಾಥ್‌ಗೆ ಹಲವು ಬಾರಿ ಇರಿದಿದ್ದಾನೆ ಎನ್ನಲಾಗಿದೆ. ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡ ಶ್ರೀನಾಥ್‌ ತೀವ್ರ ರಕ್ತಸ್ರಾವಕ್ಕೊಳಗಾಗಿ ಮನೆಯ ಸಮೀಪದ ಚರಂಡಿ ಬಳಿ ಕುಸಿದು ಬಿದ್ದಿದ್ದಾರೆ.

ಬಳಿಕ ಆರೋಪಿ ಮಧು ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಶ್ರೀನಾಥ್‌ನನ್ನು ಕುಟುಂಬಸ್ಥರು ಹಾಗೂ ಸ್ಥಳೀಯರು ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ವೈದ್ಯರು ಪರೀಕ್ಷಿಸಿ ಶ್ರೀನಾಥ್‌ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಘಟನಾ ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವೆಮುಲ ಮಧುವನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಜಗಳಕ್ಕೆ ಕಾರಣ, ಹತ್ಯೆಯ ಸಂದರ್ಭ ಹಾಗೂ ಘಟನೆಗೆ ಸಂಬಂಧಿಸಿದ ಇತರ ಅಂಶಗಳ ಬಗ್ಗೆ ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img