ನವದೆಹಲಿ: ಮುಂಬರುವ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ಮಹತ್ವದ ಸಂಘಟನಾ ಬದಲಾವಣೆ ನಡೆದಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ನೇತೃತ್ವದ ನೂತನ ರಾಷ್ಟ್ರೀಯ ಪದಾಧಿಕಾರಿಗಳ ಪಟ್ಟಿಯನ್ನು ಪಕ್ಷ ಪ್ರಕಟಿಸಿದ್ದು, ಹಲವು ಪ್ರಮುಖ ನಾಯಕರಿಗೆ ರಾಷ್ಟ್ರೀಯ ಮಟ್ಟದ ಜವಾಬ್ದಾರಿಗಳನ್ನು ನೀಡಲಾಗಿದೆ. ಈ ನೇಮಕಾತಿಗಳು ತಕ್ಷಣದಿಂದಲೇ ಜಾರಿಗೆ ಬರಲಿವೆ ಎಂದು ಬಿಜೆಪಿ ತಿಳಿಸಿದೆ.
ನೂತನ ರಾಷ್ಟ್ರೀಯ ಉಪಾಧ್ಯಕ್ಷರ ಪಟ್ಟಿಯಲ್ಲಿ ಕರ್ನಾಟಕದ ಪ್ರೊ. ಎಂ. ನಾಗರಾಜ್ ಅವರಿಗೆ ಸ್ಥಾನ ನೀಡಲಾಗಿದೆ. ಇವರೊಂದಿಗೆ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಸಿಂಧಿಯಾ, ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ತೀರಥ್ ಸಿಂಗ್ ರಾವತ್, ರಾಮ್ ಮಾಧವ್, ಬೈಜಯಂತ್ ಜಯ ಪಾಂಡಾ, ಡಿ. ಪುರಂದೇಶ್ವರಿ, ರೇಖಾ ವರ್ಮಾ, ವರ್ಷಾಬೆನ್ ನರೇಂದ್ರಭಾಯ್ ದೋಷಿ, ಡಾ. ಭಾರತಿ ಪ್ರವೀಣ್ ಪವಾರ್, ಮನ್ಪ್ರೀತ್ ಸಿಂಗ್ ಬಾದಲ್, ಲಾಲ್ ಸಿಂಗ್ ಆರ್ಯ, ಪ್ರೊ. ತಾರಿಖ್ ಮನ್ಸೂರ್ ಹಾಗೂ ಡಾ. ಮಧುಚಂದ್ರಾ ಕರ್ ಅವರನ್ನು ರಾಷ್ಟ್ರೀಯ ಉಪಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ.
ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಹುದ್ದೆಯಲ್ಲಿ ಬಿ.ಎಲ್. ಸಂತೋಷ್ ಅವರು ಮುಂದುವರಿಯಲಿದ್ದಾರೆ. ರಾಷ್ಟ್ರೀಯ ಸಹ ಪ್ರಧಾನ ಕಾರ್ಯದರ್ಶಿಗಳಾಗಿ (ಸಂಘಟನೆ) ಶಿವಪ್ರಕಾಶ್ ಹಾಗೂ ಸೌದಾನ್ ಸಿಂಗ್ ಕಾರ್ಯನಿರ್ವಹಿಸಲಿದ್ದಾರೆ.
ಇನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳ ಪಟ್ಟಿಯಲ್ಲೂ ಹಲವು ಪ್ರಮುಖ ನಾಯಕರಿಗೆ ಸ್ಥಾನ ನೀಡಲಾಗಿದೆ. ವಿನೋದ್ ತಾವ್ಡೆ, ಸುನಿಲ್ ಬನ್ಸಲ್, ತ್ರಿಪುರದ ಮಾಜಿ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್, ಸ್ಮೃತಿ ಇರಾನಿ, ಡಾ. ಸತೀಶ್ ಪೂನಿಯಾ, ಗಜೇಂದ್ರ ಪಟೇಲ್, ಹರೀಶ್ ದ್ವಿವೇದಿ ಹಾಗೂ ಸಂಜಯ್ ಭಾಟಿಯಾ ಅವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾಗಿ ನೇಮಕ ಮಾಡಲಾಗಿದೆ.
ಆಮ್ ಆದ್ಮಿ ಪಕ್ಷದಿಂದ ಬಿಜೆಪಿಗೆ ಬಂದಿರುವ ಸಂದೀಪ್ ಪಾಠಕ್ ಅವರಿಗೆ ರಾಷ್ಟ್ರೀಯ ಕಾರ್ಯದರ್ಶಿ ಸ್ಥಾನ ನೀಡಲಾಗಿದೆ. ಈ ಮೂಲಕ ಪಕ್ಷದ ರಾಷ್ಟ್ರೀಯ ಸಂಘಟನೆಯಲ್ಲಿ ವಿವಿಧ ರಾಜ್ಯಗಳ ನಾಯಕರಿಗೆ ಮಹತ್ವದ ಜವಾಬ್ದಾರಿಗಳನ್ನು ನೀಡಲಾಗಿದೆ.
ಇನ್ನು ನೂತನ ರಾಷ್ಟ್ರೀಯ ಉಪಾಧ್ಯಕ್ಷರ ನೇಮಕಾತಿಯಲ್ಲಿ ಮಹಿಳಾ ಪ್ರಾತಿನಿಧ್ಯಕ್ಕೂ ಬಿಜೆಪಿ ಒತ್ತು ನೀಡಿದೆ. ಒಟ್ಟು 13 ರಾಷ್ಟ್ರೀಯ ಉಪಾಧ್ಯಕ್ಷರ ಪೈಕಿ 6 ಮಂದಿ ಮಹಿಳಾ ನಾಯಕರಿಗೆ ಸ್ಥಾನ ನೀಡಲಾಗಿದೆ. ಮುಂಬರುವ ಚುನಾವಣೆಗಳ ಹಿನ್ನೆಲೆಯಲ್ಲಿ ನೂತನ ರಾಷ್ಟ್ರೀಯ ತಂಡದ ಮೂಲಕ ಸಂಘಟನೆಯನ್ನು ಮತ್ತಷ್ಟು ಬಲಪಡಿಸಲು ಬಿಜೆಪಿ ಮುಂದಾಗಿದೆ.



