ವಿಜಯಸಾಕ್ಷಿ ಸುದ್ದಿ, ಡಂಬಳ: ಇಂದಿನ ಯುವಜನತೆ ದೇಶದ ಭವಿಷ್ಯವಾಗಿದ್ದು, ವಿದ್ಯಾರ್ಥಿಗಳು ಉತ್ತಮ ಶಿಕ್ಷಣದೊಂದಿಗೆ ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು, ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಂಡು ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಉಪತಹಶೀಲ್ದಾರ್ ಎಸ್.ಎಸ್. ಬಿಚ್ಚಾಲಿ ಹೇಳಿದರು.
ಡಂಬಳ ಗ್ರಾಮದ ಇಂಗ್ಲಿಷ್ ಮಾಧ್ಯಮ ಉರ್ದು ಶಾಲೆಯಲ್ಲಿ ನಡೆದ ೮೦ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಜಾತಿ, ಧರ್ಮ, ಭಾಷೆ ಹಾಗೂ ಪ್ರದೇಶದ ಭೇದಗಳನ್ನು ಮೀರಿ ‘ನಾವು ಭಾರತೀಯರು’ ಎಂಬ ಭಾವನೆಯೊಂದಿಗೆ ಮುನ್ನಡೆಯಬೇಕು. ದೇಶದ ಸಂವಿಧಾನ ನಮಗೆ ಹಕ್ಕುಗಳ ಜತೆಗೆ ಕರ್ತವ್ಯಗಳನ್ನೂ ನೀಡಿದೆ. ಪ್ರತಿಯೊಬ್ಬ ನಾಗರಿಕರೂ ಕಾನೂನುಗಳನ್ನು ಗೌರವಿಸುವುದು, ಪರಿಸರ ಸಂರಕ್ಷಿಸುವುದು, ಸಾರ್ವಜನಿಕ ಆಸ್ತಿಯನ್ನು ಕಾಪಾಡುವುದು ಹಾಗೂ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಬೆಳೆಸುವುದು ತಮ್ಮ ಜವಾಬ್ದಾರಿ ಎಂದು ಅವರು ಹೇಳಿದರು.
ಸಮಾಜದ ಹಿರಿಯರಾದ ಹುಸೇನಸಾಬ ಹೊಸಬಾವಿ ಹಾಗೂ ಸಮಾಜಸೇವಕ ಬುಡ್ನೆಸಾಬ ಅತ್ತಾರ ಮಾತನಾಡಿ, ಸ್ವಾತಂತ್ರ್ಯ ಹೋರಾಟದಲ್ಲಿ ಗದಗ ಜಿಲ್ಲೆಯ ಹೋರಾಟಗಾರರ ಪಾತ್ರ ಮಹತ್ವದ್ದಾಗಿದೆ. ಮುಂಡರಗಿ ಭೀಮರಾಯ, ಹಮ್ಮಿಗೆ ಕೆಂಚನಗೌಡ, ಇಟಗಿಯ ವೀರಭದ್ರಯ್ಯ, ಶಿರೂರು ವೀರಭದ್ರಪ್ಪ, ಶಿವಮೂರ್ತಿಸ್ವಾಮಿ ಅಳವಂಡಿ, ಜನಾರ್ದನರಾಯ ದೇಸಾಯಿ, ಎಲ್.ಕೆ. ಷರೀಫ್, ಬಿಂದು ಮಾಧವರಾವ್, ಕಂಪ್ಲಿಮನಿ, ಬಿ.ಕೆ. ಪ್ರಾಣೇಶಾಚಾರ್ಯ, ಮುರಡಿ ಭೀಮಜ್ಜ ಸೇರಿದಂತೆ ಅನೇಕ ಹೋರಾಟಗಾರರ ತ್ಯಾಗವನ್ನು ಸ್ಮರಿಸಬೇಕು ಎಂದರು.
ಸ್ವಾತಂತ್ರ್ಯ ಹೋರಾಟಗಾರರು ಜಾತಿ, ಮತ, ಪಂಥದ ಭೇದವಿಲ್ಲದೆ ಜನರನ್ನು ಒಗ್ಗೂಡಿಸಿ ಹೋರಾಡಿದರು. ಅವರ ತ್ಯಾಗ, ಹೋರಾಟ ಹಾಗೂ ದೇಶಭಕ್ತಿಯ ಫಲವಾಗಿ ನಮಗೆ ಸ್ವಾತಂತ್ರ್ಯ ದೊರೆತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಂಜುಮನ ಸಮಿತಿ ಅಧ್ಯಕ್ಷ ಬಶೀರಹಮ್ಮದ ತಾಂಬೋಟಿ ಅವರು ಶಾಲೆಯ ಒಂದನೇ ತರಗತಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ತಲಾ ₹೧,೦೦೦ ವಿತರಿಸಿದರು. ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆಗಳು ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಮಹಬೂಬ ಕಾಸ್ತಾರ, ಅಂಜುಮನ ಅಧ್ಯಕ್ಷ ಬಶೀರಹಮ್ಮದ ತಾಂಬೋಟಿ, ಕಂದಾಯ ಅಧಿಕಾರಿ ಪ್ರಭು ಬಾಗಲಿ, ಮುಖ್ಯೋಪಾಧ್ಯಾಯ ಎಸ್.ಎಂ. ಶೇಖ, ಗ್ರಾಮ ಆಡಳಿತಾಧಿಕಾರಿ ಲಕ್ಷ್ಮಣ ಗುಡಸಲಮನಿ, ಎಂ.ಎಂ. ವಿಭೂತಿ, ಸಾಗರ ಚಿತ್ರಗಾರ, ಮುದಕೇಶ ತಳಗೇರಿ, ಎನ್.ಬಿ. ಶೇಖ, ಎಸ್.ಬಿ. ಕನವಳ್ಳಿ, ಹಸೀನಾ ಬಿ., ಎಸ್‌ಡಿಎಂಸಿ ಸದಸ್ಯರು, ಮಹಿಳೆಯರು ಹಾಗೂ ವಿದ್ಯಾರ್ಥಿಗಳು ಇದ್ದರು.



