ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಮಕ್ಕಳಿಗೆ ಮೊಬೈಲ್ ನೀಡುವಾಗ ಪೋಷಕರು ಎಚ್ಚರಿಕೆ ವಹಿಸಿ, ಅವರ ಚಟುವಟಿಕೆಗಳ ಬಗ್ಗೆ ಗಮನ ಹರಿಸಬೇಕು ಎಂದು ಸಖಿ ಒನ್ ಸ್ಟಾಪ್ ಕೇಂದ್ರದ ಆಡಳಿತಾಧಿಕಾರಿ ಸುಜಾತ ಮಠಪತಿ ಹೇಳಿದರು.
ದಾನಚಿಂತಾಮಣಿ ಅತ್ತಿಮಬ್ಬೆ ವಿವಿಧೋದ್ದೇಶಗಳ ಮಹಿಳಾ ಸಂಘದಿಂದ ಸ್ವಾಮಿ ವಿವೇಕಾನಂದ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಕಾನೂನು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳಿಗೆ ಮನೆಯಲ್ಲಿ ಪೌಷ್ಟಿಕ ಆಹಾರ ನೀಡಬೇಕು. ದಾಂಪತ್ಯದಲ್ಲಿ ಮನಸ್ತಾಪ ಉಂಟಾದಾಗ ತಾಳ್ಮೆಯಿಂದ ವರ್ತಿಸಬೇಕು. ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ಹಾಗೂ ಮಕ್ಕಳಿಗೆ ಸಖಿ ಒನ್ ಸ್ಟಾಪ್ ಕೇಂದ್ರದಿಂದ ವೈದ್ಯಕೀಯ ಚಿಕಿತ್ಸೆ, ಕಾನೂನು ನೆರವು, ಆಪ್ತ ಸಮಾಲೋಚನೆ, ಪೊಲೀಸ್ ನೆರವು ಹಾಗೂ ತಾತ್ಕಾಲಿಕ ವಸತಿ ಸೇರಿದಂತೆ ಐದು ಉಚಿತ ಸೌಲಭ್ಯಗಳು ದೊರೆಯುತ್ತವೆ ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯೆ ವಕೀಲೆ ಮಂಜುಳಾ ಸ್ವಾಮಿ ಮಾತನಾಡಿ, ಮಹಿಳೆಯರು ಸಂವಿಧಾನ ಹಾಗೂ ತಮ್ಮ ಹಕ್ಕುಗಳ ಬಗ್ಗೆ ಅರಿವು ಹೊಂದಬೇಕು. ದೌರ್ಜನ್ಯಕ್ಕೊಳಗಾದವರು ಯಾವುದೇ ಭಯವಿಲ್ಲದೆ ಉಚಿತ ಕಾನೂನು ನೆರವು ಪಡೆಯಬೇಕು ಎಂದು ಸಲಹೆ ನೀಡಿದರು.
ಸಂಘದ ಅಧ್ಯಕ್ಷೆ ಲಲಿತಾ ಗೌಡರ, ಶಾಂತಮ್ಮ ನಂದಪ್ಪನವರ, ಮಮತಾಜ ಬೇಗಂ ನದಾಫ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಶಿಕ್ಷಕಿ ದ್ರಾಕ್ಷಾಯಿಣಿ ರಾಯಣ್ಣವರ ನಿರೂಪಿಸಿ ವಂದಿಸಿದರು.
“ಮಹಿಳೆಯರು ಮೊಬೈಲ್, ಟಿ.ವಿ.ಯಲ್ಲಿ ಹೆಚ್ಚು ಸಮಯ ಕಳೆಯದೆ ಮಕ್ಕಳಿಗೆ ಸಮಯ ನೀಡಿ, ಅವರ ಚಟುವಟಿಕೆಗಳ ಬಗ್ಗೆ ಗಮನಹರಿಸಬೇಕು.” ಎಂದು ಸುಜಾತ ಮಠಪತಿ ಹೇಳಿದರು.
— ಸುಜಾತ ಮಠಪತಿ



