ಯಾದಗಿರಿ: ಹೆಂಡತಿ ಜೊತೆಗಿನ ಜಗಳ ವಿಕೋಪಕ್ಕೆ ತಿರುಗಿದ ಬಳಿಕ ತಂದೆಯೊಬ್ಬ ತನ್ನದೇ ಇಬ್ಬರು ಮಕ್ಕಳನ್ನು ಕಾಲುವೆಗೆ ಎಸೆದಿರುವ ಆರೋಪ ಯಾದಗಿರಿಯ ಶಹಾಪುರ ತಾಲೂಕಿನ ಗೋಗಿ ಗ್ರಾಮದಲ್ಲಿ ಕೇಳಿಬಂದಿದೆ. 9 ವರ್ಷದ ಬಾಲಕಿ ಹಾಗೂ 2 ವರ್ಷದ ಬಾಲಕನಿಗಾಗಿ ಕಾಲುವೆಯಲ್ಲಿ ತೀವ್ರ ಶೋಧ ಕಾರ್ಯ ನಡೆಯುತ್ತಿದೆ.
ಶಾಂತಪ್ಪ ಬಿರಾದಾರ್ ತನ್ನ ಮೂವರು ಮಕ್ಕಳನ್ನು ಬೈಕ್‌ನಲ್ಲಿ ಕರೆದೊಯ್ದಿದ್ದ ಎನ್ನಲಾಗಿದೆ. ಬಳಿಕ 9 ವರ್ಷದ ಸಾನ್ವಿ ಮತ್ತು 2 ವರ್ಷದ ಸೃಜನ್ ಅವರನ್ನು ಕಾಲುವೆಗೆ ಎಸೆದಿದ್ದಾನೆ ಎಂದು ಆರೋಪಿಸಲಾಗಿದೆ. ಮತ್ತೊಬ್ಬ ಮಗಳನ್ನು ಮಾತ್ರ ವಾಪಸ್ ಕರೆತಂದು ತಾಯಿಗೆ ಒಪ್ಪಿಸಿದ್ದಾನೆ ಎನ್ನಲಾಗಿದೆ.
ಇಬ್ಬರು ಮಕ್ಕಳು ಕಾಲುವೆಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದ್ದು, ಘಟನೆ ಬಳಿಕ ಅವರ ಯಾವುದೇ ಸುಳಿವು ಸಿಕ್ಕಿಲ್ಲ. ಮಕ್ಕಳಿಗಾಗಿ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಕಾಲುವೆಯಲ್ಲಿ ಶೋಧ ನಡೆಸುತ್ತಿದ್ದಾರೆ.
ಈ ಸಂಬಂಧ ಗೋಗಿ ಪೊಲೀಸ್ ಠಾಣೆಯಲ್ಲಿ ಮಕ್ಕಳ ನಾಪತ್ತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಘಟನೆ ಕುರಿತು ತನಿಖೆ ಮುಂದುವರಿಸಿದ್ದಾರೆ. ಸಂಸಾರದ ಕಲಹದ ಕೋಪವನ್ನು ಮಕ್ಕಳ ಮೇಲೆ ತೀರಿಸಿಕೊಂಡಿರುವ ಆರೋಪ ಇದೀಗ ಗ್ರಾಮದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.



