ಬೆಂಗಳೂರು: ಶಿಕ್ಷಣ ಸಂಸ್ಥೆಗಳು, ಸಂಘ ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳಿಗೆ ಸರ್ಕಾರ ಕೊಟ್ಟಿರುವ ಭೂಮಿಯನ್ನು ನಿಗದಿತ ಉದ್ದೇಶಕ್ಕೆ ಬಳಕೆ ಮಾಡದೇ ಹೋದರೆ ಸರ್ಕಾರ ಅದನ್ನು ಮರುವಶಪಡಿಸಿಕೊಳ್ಳಲಿದೆ ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ನ ಶಿವಕುಮಾರ್ ಪ್ರಶ್ನೆ ಕೇಳಿದ್ದರು. ಸಂಘ ಸಂಸ್ಥೆಗಳಿಗೆ, ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರ ಭೂಮಿ ನೀಡುತ್ತಿದ್ದು, ಅವರು ಯಾವ ಉದ್ದೇಶಕ್ಕೆ ಭೂಮಿ ಪಡೆದಿದ್ದರೋ ಅದಕ್ಕೆ ಬಳಕೆ ಮಾಡುತ್ತಿಲ್ಲ ಎಂದು ಆಕ್ಷೇಪಿಸಿದ ಅವರು, ಧಾರ್ಮಿಕ ಸಂಘಗಳಿಗೆ ಸರ್ಕಾರ ಭೂಮಿ ನೀಡಬಾರದು ಎಂದು ಒತ್ತಾಯಿಸಿದರು.
ಇದಕ್ಕೆ ಉತ್ತರ ನೀಡಿದ ಡಿಸಿಎಂ ಪರಮೇಶ್ವರ್, ಸಂಘ ಸಂಸ್ಥೆಗಳಿಗೆ, ಶಿಕ್ಷಣ ಸಂಸ್ಥೆಗಳಿಗೆ 2010ರಿಂದ 2026ರವರೆಗೆ ಸುಮಾರು 2,400 ಎಕರೆಗೂ ಹೆಚ್ಚು ಭೂಮಿಯನ್ನು ಸರ್ಕಾರ ನೀಡಿದೆ ಎಂದು ವಿವರಿಸಿದರು. ಈ ಅವಧಿಯಲ್ಲಿ ಎಲ್ಲಾ ಸರ್ಕಾರಗಳೂ ಜಮೀನು ನೀಡಿವೆ ಎಂದ ಅವರು, ಪಡೆದ ಉದ್ದೇಶಕ್ಕೆ ಜಮೀನುಗಳನ್ನು ಬಳಸಿಕೊಳ್ಳುತ್ತಿದ್ದಾರೆಯೇ ಎಂದು ಪರಿಶೀಲಿಸಲು 2020ರಲ್ಲೇ ಡಿಸಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಯಾರು ಉಪಯೋಗ ಮಾಡಿಲ್ಲವೋ ಅಥವಾ ಕೇಳಿದ ಉದ್ದೇಶಕ್ಕೆ ಬಳಕೆಯಾಗದೇ ಹೋಗಿದೆಯೋ, ಆ ಜಮೀನನ್ನು ವಾಪಸ್ ಪಡೆಯಲಾಗುವುದು ಎಂದು ಸ್ಪಷ್ಟಪಡಿಸಿದ ಡಿಸಿಎಂ, ಸಂಘ ಸಂಸ್ಥೆಗಳಿಗೆ ಜಮೀನು ಕೊಡುವುದಕ್ಕೆ ನಿಯಮಗಳಿದ್ದು, ಅದರ ಅನ್ವಯವೇ ಭೂಮಿ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.



