ವಿಜಯಸಾಕ್ಷಿ ಸುದ್ದಿ, ಗದಗ: ರೈತರು, ಕೃಷಿ ಕೂಲಿ ಕಾರ್ಮಿಕರು ಸೇರಿದಂತೆ ಶ್ರಮಿಕ ವರ್ಗದ ಆರ್ಥಿಕ ಹಾಗೂ ಸಾಮಾಜಿಕ ಉನ್ನತಿಗಾಗಿ ಸದಾ ಚಿಂತಿಸಿದ ದಿ. ಕೆ.ಎಚ್. ಪಾಟೀಲ ಅವರ ಹೆಸರಿನಲ್ಲಿ ಶ್ರಮಿಕರ ದುಡಿಮೆಯ ಸ್ಥಳವಾದ ಅಟೋನಗರ ನಿರ್ಮಾಣಗೊಂಡಿರುವುದು ಸಂತಸದ ಸಂಗತಿ ಎಂದು ಶಾಸಕ ಎಚ್.ಕೆ. ಪಾಟೀಲ ಹೇಳಿದರು.
ಹುಬ್ಬಳ್ಳಿ ರಸ್ತೆಯ ಕೆಇಬಿ ಗ್ರಿಡ್ ಬಳಿಯಲ್ಲಿ ಫೋರ್ ವ್ಹೀಲರ್ ಮೆಕ್ಯಾನಿಕಲ್ ಹಾಗೂ ಬಾಡಿ ವರ್ಕ್ಸ್ ಅಸೋಸಿಯೇಶನ್ ವತಿಯಿಂದ ಆಯೋಜಿಸಿದ್ದ ಕೆ.ಎಚ್. ಪಾಟೀಲ ಅಟೋನಗರ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಅಟೋನಗರದ ನಿರ್ಮಾಣಕ್ಕೆ ಸಂಬಂಧಿಸಿದಂತೆ ತಾವು ನೀಡಿದ ಸಲಹೆ-ಸೂಚನೆಗಳನ್ನು ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉತ್ತಮವಾಗಿ ಅನುಷ್ಠಾನಗೊಳಿಸಿದ್ದು, ನಿರ್ಮಿಸಿರುವ ಶೆಡ್‌ಗಳ ಕಾರ್ಯ ತೃಪ್ತಿಕರವಾಗಿದೆ. ಇನ್ನಷ್ಟು ಶ್ರಮಿಕರು ಇಲ್ಲಿ ತಮ್ಮ ಕಾರ್ಯಚಟುವಟಿಕೆ ನಡೆಸಲು ಆಸಕ್ತಿ ತೋರಿಸುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಮಾರ್ಚ್ 16ರೊಳಗೆ ಸಂಘಕ್ಕೆ ಮತ್ತಷ್ಟು ಎರಡು ಎಕರೆ ಜಮೀನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.
ಹೆಸ್ಕಾಂ ಅಧ್ಯಕ್ಷ ಶಾಸಕ ಅಜ್ಜಂಪೀರ ಖಾದ್ರಿ ಮಾತನಾಡಿ, ಅಟೋನಗರದಲ್ಲಿ ಆರಂಭವಾಗಲಿರುವ ಕಾರ್ಮಿಕರ ಉದ್ದಿಮೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಲ್ಲಿ ಯಾವುದೇ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡ ಮಾಜಿ ಮಹಾಪೌರ ಅನಿಲಕುಮಾರ ಪಾಟೀಲ, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಸಾದಿಕ ನರಗುಂದ, ರಜಾಕ ಡಂಕೇದ, ಬಿ.ಎಂ. ನದ್ದಿಮುಲ್ಲಾ, ನಿಂಗಪ್ಪ ಎಂಬತ್ನಾಳ, ಸಯ್ಯದ ಜಮೀರ ಖಾಜಿ, ಮಹಮ್ಮದ್ ರಫೀಕ ನವಲಗುಂದ, ಮೈನುದ್ದೀನ ನಾಗಡ, ಮಹಮ್ಮದ್ ಅಲಿ ಕಲೆಗಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
“ಕಾರ್ಮಿಕರ ಅಗತ್ಯಗಳನ್ನು ಗಮನಿಸಿ ಶಾಸಕ ಎಚ್.ಕೆ. ಪಾಟೀಲರು ನೀಡಿದ ಸಹಕಾರ ಹಾಗೂ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಬದುಕು ರೂಪಿಸಿಕೊಳ್ಳುತ್ತೇವೆ.”
— ಉಸ್ಮಾನ ಮಾಳೆಕೊಪ್ಪ, ಅಸೋಸಿಯೇಶನ್ ಅಧ್ಯಕ್ಷ



