ವಿಜಯಸಾಕ್ಷಿ ಸುದ್ದಿ, ಗದಗ: ಭಾರತದಲ್ಲಿ ಪಾರಂಪರಿಕವಾಗಿ ಆಚರಿಸಿಕೊಂಡು ಬರುತ್ತಿರುವ ಪ್ರತಿಯೊಂದು ಆಚರಣೆಯ ಹಿಂದೆಯೂ ವಿಶಿಷ್ಟ ಕಾರಣವಿದ್ದು, ಅವು ವೈಜ್ಞಾನಿಕ ಅಂಶಗಳನ್ನು ಒಳಗೊಂಡಿವೆ. ವಿಜ್ಞಾನ ಮತ್ತು ಆಧ್ಯಾತ್ಮ ಪರಸ್ಪರ ವಿರೋಧಿಗಳಲ್ಲ, ವಿಜ್ಞಾನದೊಂದಿಗೆ ಹೊಂದಿಕೊಂಡು ಸಾಗುವುದೇ ಆಧ್ಯಾತ್ಮದ ಆಶಯ ಎಂದು ಅಂತೂರ-ಬೆಂತೂರ ಬೂದೀಶ್ವರ ಸಂಸ್ಥಾನ ಮಠದ ಡಾ. ರಾಚೋಟೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ನಗರದ ಒಕ್ಕಲಗೇರಿ ಓಣಿಯ ದ್ಯಾಮವ್ವನ ಕಟ್ಟೆ ದೇವಸ್ಥಾನದ ಆವರಣದಲ್ಲಿ ನಡೆಯುತ್ತಿರುವ ಶ್ರೀ ದ್ಯಾಮವ್ವ ಹಾಗೂ ದುರುಗಮ್ಮ ದೇವಿಯರ ಹರಿಜಾತ್ರೋತ್ಸವದ ಎರಡನೇ ದಿನದ ಸಭಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ವಿಜ್ಞಾನ ವಸ್ತುಗಳ ಮೇಲೆ ಪ್ರಯೋಗ ನಡೆಸಿದರೆ, ಆಧ್ಯಾತ್ಮ ಸ್ವಯಂ ಅನುಭವ, ಜ್ಞಾನ ಹಾಗೂ ತಪಸ್ಸಿನ ಮೂಲಕ ಸತ್ಯವನ್ನು ಅರಿಯುವ ಮಾರ್ಗವಾಗಿದೆ. 12 ವರ್ಷಕ್ಕೊಮ್ಮೆ ನಡೆಯುವ ಕುಂಭಮೇಳ ಹಾಗೂ ಜಾತ್ರೆಗಳ ಹಿಂದೆಯೂ ವೈಜ್ಞಾನಿಕ ಕಾರಣಗಳಿವೆ. ತುಳಸಿ, ಬಿಲ್ವಪತ್ರೆ ಹಾಗೂ ಬೇವಿನ ಬಳಕೆಯಿಂದಾಗುವ ಪ್ರಯೋಜನಗಳೇ ನಮ್ಮ ಪೂರ್ವಜರ ವೈಜ್ಞಾನಿಕ ಜ್ಞಾನಕ್ಕೆ ಸಾಕ್ಷಿ ಎಂದರು.
ಭಾರತ ವೇದ ಜ್ಞಾನದ ಮೂಲಕ ಜಗತ್ತಿಗೆ ಜ್ಞಾನದ ಗಂಗೆಯನ್ನು ಹರಿಸಿದೆ. ಇಂದಿನ ಎಐ ಯುಗದಲ್ಲಿಯೂ ಮಾನವ ನಿರ್ಮಿತ ಜ್ಞಾನವೇ ಆಧಾರವಾಗಿದೆ. ಹೀಗಾಗಿ ನಮ್ಮ ಆಚರಣೆ, ಸಂಸ್ಕಾರ ಹಾಗೂ ಪರಂಪರೆಯನ್ನು ಅಧ್ಯಯನ ಮಾಡಿ ಮುಂದಿನ ಪೀಳಿಗೆಗೆ ತಲುಪಿಸಬೇಕು. ಜಾತ್ರೆಗಳು ಸಮುದಾಯದ ಒಗ್ಗಟ್ಟು, ಪರಸ್ಪರ ಪ್ರೀತಿ ಮತ್ತು ವಿಶ್ವಾಸಕ್ಕೆ ನಾಂದಿಯಾಗಲಿ ಎಂದು ಆಶಿಸಿದರು.
ಜಾತ್ರಾ ಸಮಿತಿ ಕಾರ್ಯಾಧ್ಯಕ್ಷ ಫಕೀರಪ್ಪ ಹೆಬಸೂರ ಮಾತನಾಡಿ, ದ್ಯಾಮವ್ವ-ದುರುಗಮ್ಮ ದೇವಿಯರ ಜಾತ್ರೆಯ ಇತಿಹಾಸವನ್ನು ವಿವರಿಸಿ, ಭವಿಷ್ಯದಲ್ಲಿ ಭವ್ಯ ಸಮುದಾಯ ಭವನ ನಿರ್ಮಾಣಕ್ಕೆ ಎಲ್ಲರೂ ಸಹಕರಿಸಬೇಕು ಎಂದರು.
ಬಣಜಿಗ ಸಮಾಜದ ಜಿಲ್ಲಾಧ್ಯಕ್ಷ ಈಶಣ್ಣ ಮುನವಳ್ಳಿ ಮಾತನಾಡಿ, ಜಾತ್ರೆಯ ಯಶಸ್ಸಿನಲ್ಲಿ ತಾಯಂದಿರು ಹಾಗೂ ಯುವಕರ ಪರಿಶ್ರಮ ಪ್ರಮುಖವಾಗಿದೆ. ಜಾತ್ರೆಯ ಇತಿಹಾಸವನ್ನು ಪುಸ್ತಕ ರೂಪದಲ್ಲಿ ದಾಖಲಿಸಿ ಮುಂದಿನ ಪೀಳಿಗೆಗೆ ಪರಿಚಯಿಸಬೇಕು ಎಂದು ಹೇಳಿದರು.
ನಗರಸಭಾ ಸದಸ್ಯ ರಾಘವೇಂದ್ರ ಯಳವತ್ತಿ ಸೇರಿದಂತೆ ಗಣ್ಯರು ಮಾತನಾಡಿದರು. ಕಾರ್ಯಕ್ರಮದಲ್ಲಿ ಪೂಜ್ಯಶ್ರೀ ಶಿವಶರಣೆ ನೀಲಮ್ಮ ತಾಯಿ ಅಸುಂಡಿ, ಕೊಟ್ರಪ್ಪ ಕಮತರ, ಡಾ. ಡಿ.ಬಿ. ಬಿಡಿನಹಾಳ, ಆರುಣಕುಮಾರ ಚವ್ಹಾಣ, ಆರ್.ಡಿ. ಕಡ್ಡಿಕೊಪ್ಪ, ಪ್ರಕಾಶ ಕರಿ, ನಗರಸಭಾ ಸದಸ್ಯರಾದ ಲಕ್ಷ್ಮವ್ವ ಭಜಂತ್ರಿ, ಪೂರ್ಣಿಮಾ ಭರದ್ವಾಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುರೇಶ ಮರಳಪ್ಪನವರ ಸ್ವಾಗತಿಸಿದರು. ಬಾಹುಬಲಿ ಜೈನರ ನಿರೂಪಿಸಿದರು. ವಿರೂಪಾಕ್ಷಪ್ಪ ಅಕ್ಕಿ ವಂದಿಸಿದರು. ಬಳಿಕ ಕಾಮಿಡಿ ಕಿಲಾಡಿಯ ಸಂಜು ಬಸಯ್ಯ ಹಾಗೂ ಗದುಗಿನ ನಟರಂಗ ಕಲಾ ಸಂಸ್ಥೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
“ವಿಜ್ಞಾನ ಮತ್ತು ಆಧ್ಯಾತ್ಮ ಪರಸ್ಪರ ವಿರೋಧಿಗಳಲ್ಲ. ನಮ್ಮ ಆಚರಣೆಗಳಲ್ಲಿಯೂ ವೈಜ್ಞಾನಿಕ ಅಂಶಗಳಿದ್ದು, ಅವುಗಳ ಹಿಂದಿನ ಜ್ಞಾನವನ್ನು ಅರಿತು ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕು.”
— ಡಾ. ರಾಚೋಟೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು



