HomeGadag Newsವರಮಹಾಲಕ್ಷ್ಮಿ ಹಬ್ಬದ ಖರೀದಿ ಭರಾಟೆ; ಬೆಲೆ ಏರಿಕೆಯ ಬಿಸಿ

ವರಮಹಾಲಕ್ಷ್ಮಿ ಹಬ್ಬದ ಖರೀದಿ ಭರಾಟೆ; ಬೆಲೆ ಏರಿಕೆಯ ಬಿಸಿ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಶ್ರಾವಣ ಮಾಸದ ಎರಡನೇ ಶುಕ್ರವಾರ ಆಚರಿಸುವ ವರಮಹಾಲಕ್ಷ್ಮಿ ವ್ರತದ ಹಿನ್ನೆಲೆಯಲ್ಲಿ ಪಟ್ಟಣದ ಮಾರುಕಟ್ಟೆಯಲ್ಲಿ ಗುರುವಾರ ಖರೀದಿ ಭರಾಟೆ ಜೋರಾಗಿತ್ತು. ಹೂವು, ಹಣ್ಣು, ಪೂಜಾ ಸಾಮಗ್ರಿ, ಲಕ್ಷ್ಮಿ ಮೂರ್ತಿ ಹಾಗೂ ಅಲಂಕಾರಿಕ ವಸ್ತುಗಳ ಖರೀದಿಗೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಮಾರುಕಟ್ಟೆ ಜನದಟ್ಟಣೆಯಿಂದ ಕೂಡಿತ್ತು.

ಹಬ್ಬದ ಸಂಭ್ರಮದ ನಡುವೆಯೇ ಅಗತ್ಯ ವಸ್ತುಗಳ ಬೆಲೆ ಏರಿಕೆ ಗ್ರಾಹಕರಿಗೆ ಬಿಸಿ ಮುಟ್ಟಿಸಿದೆ. ಸೇವಂತಿ ಹೂವಿನ ದರ ಕೆಜಿಗೆ ₹800ಕ್ಕೆ ತಲುಪಿದ್ದು, ದುಬಾರಿ ದರದಿಂದಾಗಿ ಗ್ರಾಹಕರು ಕೆಜಿ ಅಥವಾ ಅರ್ಧ ಕೆಜಿ ಬದಲಾಗಿ 50ರಿಂದ 100 ಗ್ರಾಂನಷ್ಟು ಮಾತ್ರ ಖರೀದಿಸುತ್ತಿರುವುದು ಕಂಡುಬಂತು.

ಹಣ್ಣು, ಪೂಜಾ ಸಾಮಗ್ರಿಗೂ ದರ ಏರಿಕೆ

ಬಾಳೆ, ಸೇಬು, ಕಿತ್ತಳೆ, ಚಿಕ್ಕೂ ಹಾಗೂ ಮೋಸಂಬಿ ಒಳಗೊಂಡ ಹಣ್ಣುಗಳ ಸೆಟ್ ₹150ರಿಂದ ₹200ರವರೆಗೆ ಮಾರಾಟವಾಯಿತು. ಬಾಳೆಕಂಬಕ್ಕೆ ₹50 ದರವಿತ್ತು. ವೀಳ್ಯದೆಲೆ, ಹೂವು, ಬಾಳೆ, ಕಬ್ಬು, ದಿನಸಿ ಹಾಗೂ ಅಲಂಕಾರಿಕ ವಸ್ತುಗಳ ಬೆಲೆಯಲ್ಲೂ ಏರಿಕೆಯಾಗಿದೆ.

ವರಮಹಾಲಕ್ಷ್ಮಿ ಮೂರ್ತಿಗಳಿಗೆ ಬೇಡಿಕೆ ಹೆಚ್ಚಾಗಿದ್ದು, ವಿವಿಧ ಗಾತ್ರದ ಮೂರ್ತಿಗಳನ್ನು ಮಹಿಳೆಯರು ಖರೀದಿಸಿದರು. ಅರಿಶಿಣ, ಕುಂಕುಮ, ಅಕ್ಷತೆ, ಕರ್ಪೂರ ಸೇರಿದಂತೆ ಪೂಜಾ ಸಾಮಗ್ರಿಗಳ ಸಿದ್ಧ ಕಿಟ್‌ಗಳಿಗೂ ಬೇಡಿಕೆ ಕಂಡುಬಂತು. ಹೊಸ ಸೀರೆ, ಬಳೆ ಹಾಗೂ ಅಲಂಕಾರಿಕ ವಸ್ತುಗಳ ಖರೀದಿಯಲ್ಲೂ ಮಹಿಳೆಯರು ಆಸಕ್ತಿ ತೋರಿದರು.

ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಮಧ್ಯಮ ವರ್ಗದ ಕುಟುಂಬಗಳು ಅಗತ್ಯ ವಸ್ತುಗಳಿಗೆ ಮಾತ್ರ ಆದ್ಯತೆ ನೀಡಿ ಖರೀದಿ ಪ್ರಮಾಣ ಕಡಿಮೆ ಮಾಡುತ್ತಿರುವುದು ಕಂಡುಬಂತು. ಆದರೂ ಹಬ್ಬದ ಸಂಪ್ರದಾಯಕ್ಕೆ ಧಕ್ಕೆಯಾಗದಂತೆ ತಮ್ಮ ಆರ್ಥಿಕ ಸಾಮರ್ಥ್ಯಕ್ಕೆ ತಕ್ಕಂತೆ ಸರಳವಾಗಿ ಪೂಜೆ ನೆರವೇರಿಸಲು ಕುಟುಂಬಗಳು ಸಜ್ಜಾಗಿವೆ.

ಮಾರುಕಟ್ಟೆಯ ಮುಂದುವರಿದ ಭಾಗದಲ್ಲಿ ದುರಸ್ತಿ ಕಾಮಗಾರಿ ನಡೆಯುತ್ತಿರುವುದರ ಜತೆಗೆ ಹಬ್ಬದ ಖರೀದಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಮಾರುಕಟ್ಟೆ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಯಿತು. ಪೊಲೀಸರು ಸಂಚಾರ ನಿಯಂತ್ರಿಸಲು ಹರಸಾಹಸಪಟ್ಟರು. ಗ್ರಾಮೀಣ ಭಾಗಗಳಿಂದಲೂ ಜನರು ಪಟ್ಟಣಕ್ಕೆ ಆಗಮಿಸಿದ್ದರಿಂದ ಹೂವು, ಹಣ್ಣು, ಬಟ್ಟೆ, ಬಳೆ ಹಾಗೂ ಪೂಜಾ ಸಾಮಗ್ರಿಗಳ ಮಾರಾಟ ಚುರುಕುಗೊಂಡಿತ್ತು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img