HomeBengaluru Newsಸಿನಿಮಾ ಹೆಸರಲ್ಲಿ 3.85 ಕೋಟಿ ಹಣ ಪಡೆದು ವಂಚಿಸಿದ್ರಾ ಖ್ಯಾತ ನಿರ್ದೇಶಕ!? ಓಂಪ್ರಕಾಶ್ ರಾವ್ ವಿರುಧ್ದ...

ಸಿನಿಮಾ ಹೆಸರಲ್ಲಿ 3.85 ಕೋಟಿ ಹಣ ಪಡೆದು ವಂಚಿಸಿದ್ರಾ ಖ್ಯಾತ ನಿರ್ದೇಶಕ!? ಓಂಪ್ರಕಾಶ್ ರಾವ್ ವಿರುಧ್ದ ದಾಖಲಾಯ್ತು ಕೇಸ್

For Dai;y Updates Join Our whatsapp Group

ಬೆಂಗಳೂರು: ಖ್ಯಾತ ಕನ್ನಡ ಚಿತ್ರ ನಿರ್ದೇಶಕ ಹಾಗೂ ನಟ ಓಂಪ್ರಕಾಶ್ ರಾವ್ ವಿರುದ್ಧ ₹3.85 ಕೋಟಿ ಹಣ ಪಡೆದು ವಾಪಸ್ ನೀಡದೆ ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಈ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಓಂಪ್ರಕಾಶ್ ರಾವ್ ಹಾಗೂ ಅವರ ಪತ್ನಿ ಡೆನ್ನಿಸಾ ಪ್ರಕಾಶ್ ವಿರುದ್ಧ ಆರೋಪ ಮಾಡಲಾಗಿದೆ.

ವಾಸುದೇವರೆಡ್ಡಿ, ಭಾಸ್ಕರ್ ಶೆಟ್ಟಿ, ವಸಂತಮ್ಮ ಹಾಗೂ ಜಯಲಕ್ಷ್ಮಿ ಎಂಬುವರು ದೂರು ನೀಡಿದ್ದು, ‘ಫೀನಿಕ್ಸ್’ ಸಿನಿಮಾ ನಿರ್ಮಾಣಕ್ಕಾಗಿ ಹಂತ ಹಂತವಾಗಿ ಹಣ ಪಡೆದು ಬಳಿಕ ಹಣವನ್ನು ವಾಪಸ್ ನೀಡದೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಹಣ ವಾಪಸ್ ಕೇಳಿದಾಗ ಕಿರುಕುಳ ನೀಡುವುದರ ಜೊತೆಗೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪವೂ ದೂರಿನಲ್ಲಿ ಕೇಳಿಬಂದಿದೆ.

ದೂರುದಾರರ ಪ್ರಕಾರ, ‘ಫೀನಿಕ್ಸ್’ ಸಿನಿಮಾಕ್ಕಾಗಿ ಓಂಪ್ರಕಾಶ್ ರಾವ್ ಅವರು ವಿವಿಧ ವ್ಯಕ್ತಿಗಳಿಂದ ಹಣ ಪಡೆದಿದ್ದಾರೆ. ಸಿನಿಮಾ ನಿರ್ಮಾಣ ಹಾಗೂ ಇತರ ಕಾರಣಗಳಿಗಾಗಿ ನೀಡಿದ ಹಣವನ್ನು ನಿಗದಿತ ಅವಧಿಯಲ್ಲಿ ವಾಪಸ್ ನೀಡುವುದಾಗಿ ಭರವಸೆ ನೀಡಿದ್ದರೂ, ಹಲವು ವರ್ಷ ಕಳೆದರೂ ಹಣ ಪಾವತಿಸಿಲ್ಲ ಎಂದು ಆರೋಪಿಸಲಾಗಿದೆ.

10 ಲಕ್ಷ ನೀಡಿದ್ದ ಭಾಸ್ಕರ್ ಶೆಟ್ಟಿ:

ದೂರುದಾರ ಭಾಸ್ಕರ್ ಶೆಟ್ಟಿ ಮಾತನಾಡಿ, 2023ರಲ್ಲಿ ಓಂಪ್ರಕಾಶ್ ರಾವ್ ಅವರ ಪರಿಚಯವಾಗಿತ್ತು. ತಾವು ಹೀರೋ ಆಗಬೇಕು ಎಂಬ ಆಸೆ ಹೊಂದಿದ್ದ ಸಂದರ್ಭದಲ್ಲಿ ಓಂಪ್ರಕಾಶ್ ರಾವ್ ಅವರಿಗೆ ₹10 ಲಕ್ಷ ಹಣ ನೀಡಿದ್ದೆ ಎಂದು ಹೇಳಿದ್ದಾರೆ.

2023ರಲ್ಲಿ ನೀಡಿದ ₹10 ಲಕ್ಷ ಹಣಕ್ಕೆ ಬಡ್ಡಿ ಸೇರಿ ಇದೀಗ ಸುಮಾರು ₹20 ಲಕ್ಷ ಆಗಿದೆ. ಆದರೆ ಈವರೆಗೆ ಒಂದು ರೂಪಾಯಿ ಕೂಡ ವಾಪಸ್ ಬಂದಿಲ್ಲ. ತಾವು ಬೇರೆಯವರ ಬಳಿ ಸಾಲ ಮಾಡಿಕೊಂಡು ಹಣ ನೀಡಿದ್ದಾಗಿ ಅವರು ಹೇಳಿದ್ದಾರೆ.

3.30 ಕೋಟಿ ಹಣ ಪಡೆದಿದ್ದಾರೆ ಎಂಬ ಆರೋಪ:

ಇನ್ನು ಫೈನಾನ್ಸ್ ವ್ಯವಹಾರ ನಡೆಸುವ ವಾಸುದೇವರೆಡ್ಡಿ ಅವರಿಂದಲೂ ಸುಮಾರು ₹3.30 ಕೋಟಿ ಹಣ ಪಡೆದಿದ್ದಾರೆ ಎಂದು ಭಾಸ್ಕರ್ ಶೆಟ್ಟಿ ಆರೋಪಿಸಿದ್ದಾರೆ. ಒಟ್ಟಾರೆ ಸುಮಾರು ₹3.85 ಕೋಟಿ ಹಣವನ್ನು ವಿವಿಧ ವ್ಯಕ್ತಿಗಳಿಂದ ಪಡೆದಿದ್ದು, ಹಣ ವಾಪಸ್ ನೀಡುವಂತೆ ಹಲವು ಬಾರಿ ಮನವಿ ಮಾಡಿದ್ದರೂ ನಿರಂತರವಾಗಿ ಕಾಲಾವಕಾಶ ಕೇಳುತ್ತಿದ್ದಾರೆ ಎಂದು ಹೇಳಿದ್ದಾರೆ.

ಆರು ತಿಂಗಳಲ್ಲಿ ಹಣ ನೀಡುವುದಾಗಿ ಹಲವು ಬಾರಿ ಹೇಳಿದ್ದರೂ ಹಣ ನೀಡದೆ ಸತಾಯಿಸುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ಈ ಸಮಸ್ಯೆ ಮುಂದುವರಿದಿದೆ ಎಂದು ಅವರು ಆರೋಪಿಸಿದ್ದಾರೆ.

ಮಹಿಳೆಯರಿಂದಲೂ ಹಣ ಪಡೆದ ಆರೋಪ:

ಕೆಲ ಮಹಿಳೆಯರಿಂದಲೂ ಸುಮಾರು ₹25 ಲಕ್ಷ ಹಣ ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಮಹಿಳೆಯರು ತಮ್ಮ ಆಸ್ತಿಯನ್ನು ಮಾರಿ ಹಣ ನೀಡಿದ್ದಾರೆ ಎಂದು ಭಾಸ್ಕರ್ ಶೆಟ್ಟಿ ಹೇಳಿದ್ದಾರೆ. ಸಿನಿಮಾ ನಿರ್ಮಾಣ ಹಾಗೂ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಹಣ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಫಿಲ್ಮ್ ಚೇಂಬರ್‌ಗೂ ದೂರು:

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಫಿಲ್ಮ್ ಚೇಂಬರ್‌ನಲ್ಲೂ ದೂರು ನೀಡಲಾಗಿದೆ. ಸಿನಿಮಾ ಕ್ಷೇತ್ರದ ಮಟ್ಟದಲ್ಲಿ ಸಮಸ್ಯೆ ಬಗೆಹರಿಯದಿದ್ದರೆ ಕಾನೂನು ಕ್ರಮಕ್ಕೆ ಮುಂದಾಗುವುದಾಗಿ ದೂರುದಾರರು ಹೇಳಿದ್ದಾರೆ.

ಓಂಪ್ರಕಾಶ್ ರಾವ್ ಅವರು ಹಣ ಪಡೆದಿರುವುದಕ್ಕೆ ಸಂಬಂಧಿಸಿದಂತೆ ಅಗ್ರಿಮೆಂಟ್ ಹಾಗೂ ಚೆಕ್ ನೀಡಿದ್ದಾರೆ. ಹೀಗಾಗಿ ಹಣ ವಾಪಸ್ ನೀಡದಿದ್ದರೆ ವಂಚನೆ ಪ್ರಕರಣ ಅಥವಾ ಚೆಕ್ ಬೌನ್ಸ್ ಪ್ರಕರಣ ದಾಖಲಿಸುವುದಾಗಿ ಭಾಸ್ಕರ್ ಶೆಟ್ಟಿ ತಿಳಿಸಿದ್ದಾರೆ.

ಹಣ ಕೇಳಲು ಹೋದಾಗ ಬೆದರಿಕೆ ಆರೋಪ:

ಹಣ ವಾಪಸ್ ಕೇಳಲು ಓಂಪ್ರಕಾಶ್ ರಾವ್ ಅವರ ಮನೆಗೆ ತೆರಳಿದ್ದ ಸಂದರ್ಭದಲ್ಲಿ ದೂರುದಾರರಿಗೆ ಬೆದರಿಕೆ ಹಾಕಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಓಂಪ್ರಕಾಶ್ ರಾವ್ ಹಾಗೂ ಅವರ ಪತ್ನಿ ಡೆನ್ನಿಸಾ ಪ್ರಕಾಶ್ ವಿರುದ್ಧವೂ ದೂರು ನೀಡಲಾಗಿದೆ.

‘ನಮ್ಮ ನಡುವೆ ಉತ್ತಮ ಒಡನಾಟವಿದ್ದ ಕಾರಣ ಇಷ್ಟು ದಿನ ಸುಮ್ಮನಿದ್ದೆವು. ಹಲವು ಬಾರಿ ಮಾತುಕತೆ ನಡೆಸಿ ಹಣ ನೀಡುವಂತೆ ಕೇಳಿದ್ದೇವೆ. ಹಣ ನೀಡುವುದಾಗಿ ಹೇಳುತ್ತಲೇ ಬಂದಿದ್ದಾರೆ. ಇದೀಗ ಕಾನೂನು ಮೊರೆ ಹೋಗುವ ಪರಿಸ್ಥಿತಿ ಬಂದಿದೆ’ ಎಂದು ಭಾಸ್ಕರ್ ಶೆಟ್ಟಿ ತಿಳಿಸಿದ್ದಾರೆ.

ಸದ್ಯ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮುಂದಿನ ಕ್ರಮ ಕೈಗೊಳ್ಳಬೇಕಿದೆ. ಆರೋಪಗಳ ಕುರಿತು ಓಂಪ್ರಕಾಶ್ ರಾವ್ ಹಾಗೂ ಅವರ ಪತ್ನಿ ಡೆನ್ನಿಸಾ ಪ್ರಕಾಶ್ ಅವರ ಪ್ರತಿಕ್ರಿಯೆ ಇನ್ನಷ್ಟೇ ಲಭ್ಯವಾಗಬೇಕಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img