ಬೆಂಗಳೂರು: ಬಿ ಖಾತಾದಿಂದ ಎ ಖಾತಾಗೆ ಪರಿವರ್ತನೆ ಮಾಡಿಕೊಳ್ಳಲು ಅರ್ಜಿ ಸಲ್ಲಿಸುವ ಗಡುವು ನಾಳೆ, ಆಗಸ್ಟ್ 23ಕ್ಕೆ ಮುಕ್ತಾಯವಾಗಲಿದೆ. ಅರ್ಜಿ ಸಲ್ಲಿಕೆ ಅವಧಿಯನ್ನು ಯಾವುದೇ ಕಾರಣಕ್ಕೂ ವಿಸ್ತರಿಸುವುದಿಲ್ಲ ಎಂದು ಐಎಎಸ್ ಅಧಿಕಾರಿ ಮುನೀಶ್ ಮೌದ್ಗಿಲ್ ಸ್ಪಷ್ಟಪಡಿಸಿದ್ದಾರೆ.
ಎ ಖಾತಾ ಪರಿವರ್ತನೆಗೆ ಇದುವರೆಗೆ ಸುಮಾರು 70 ಸಾವಿರ ಅರ್ಜಿಗಳು ಮಾತ್ರ ಸಲ್ಲಿಕೆಯಾಗಿವೆ. ಬೆಂಗಳೂರಿನಲ್ಲಿ ಸುಮಾರು ಏಳೂವರೆ ಲಕ್ಷ ಬಿ ಖಾತಾ ಆಸ್ತಿಗಳಿದ್ದರೂ, ಅರ್ಜಿ ಸಲ್ಲಿಕೆಗೆ ನಿರೀಕ್ಷಿತ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಸಲ್ಲಿಕೆಯಾಗಿರುವ ಅರ್ಜಿಗಳ ಪೈಕಿ ಸುಮಾರು 20 ಸಾವಿರ ಅರ್ಜಿಗಳಿಗೆ ಈಗಾಗಲೇ ಎ ಖಾತಾ ಮಂಜೂರಾಗಿದೆ ಎಂದು ಮುನೀಶ್ ಮೌದ್ಗಿಲ್ ತಿಳಿಸಿದ್ದಾರೆ.
ಮಾರ್ಗಸೂಚಿ ದರದ ಶೇ.2ರಷ್ಟು ಮೊತ್ತ ಪಾವತಿಸಿ ಬಿ ಖಾತಾದಿಂದ ಎ ಖಾತಾಗೆ ಪರಿವರ್ತನೆ ಮಾಡಿಕೊಳ್ಳಲು ಸರ್ಕಾರ ಅವಕಾಶ ನೀಡಿತ್ತು. ಈ ವಿಶೇಷ ರಿಯಾಯಿತಿ ಯೋಜನೆಯಡಿ ಅರ್ಜಿ ಸಲ್ಲಿಸಲು ಭಾನುವಾರ ಕೊನೆಯ ಅವಕಾಶವಾಗಿದೆ.
ನಾಳೆಯೊಳಗೆ ಅರ್ಜಿ ಸಲ್ಲಿಸದಿದ್ದರೆ ಸರ್ಕಾರ ನೀಡಿರುವ ಡಿಸ್ಕೌಂಟ್ ಆಫರ್ ಮುಕ್ತಾಯವಾಗಲಿದೆ. ಹೀಗಾಗಿ ಬಿ ಖಾತಾ ಹೊಂದಿರುವ ಆಸ್ತಿ ಮಾಲೀಕರು ಅಂತಿಮ ದಿನಾಂಕದೊಳಗೆ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ.
ಈ ಬಾರಿಯೂ ಬಿ ಟು ಎ ಖಾತಾ ಪರಿವರ್ತನೆಗೆ ಸಾರ್ವಜನಿಕರಿಂದ ನಿರೀಕ್ಷಿತ ಸ್ಪಂದನೆ ಸಿಕ್ಕಿಲ್ಲ. ಒಟ್ಟು ಬಿ ಖಾತಾ ಆಸ್ತಿಗಳ ಸಂಖ್ಯೆಗೆ ಹೋಲಿಸಿದರೆ ಅರ್ಜಿ ಸಲ್ಲಿಸಿರುವವರ ಸಂಖ್ಯೆ ಕಡಿಮೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



