ದೊಡ್ಡಬಳ್ಳಾಪುರ: ಪಾಕಿಸ್ತಾನಿ ಗ್ಯಾಂಗ್‌ಗಳ ಜೊತೆ ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕದಲ್ಲಿದ್ದ ಆರೋಪದ ಮೇಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ದೊಡ್ಡಬಳ್ಳಾಪುರ ನಗರ ಪೊಲೀಸರು, ಕೌಂಟರ್ ಇಂಟೆಲಿಜೆನ್ಸ್ ಸೆಲ್ ಹಾಗೂ ಸೆಂಟ್ರಲ್ ಐಬಿ ಅಧಿಕಾರಿಗಳಿಂದ ಬಂದ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನನ್ನು ದೊಡ್ಡಬಳ್ಳಾಪುರ ನಗರದ ಇಸ್ಲಾಂಪುರ ನಿವಾಸಿ ಸೈಯದ್ ಅಬೂಬಕರ್(28) ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ಪಾಕಿಸ್ತಾನ ಮೂಲದ ಶಾಜದ್ ಭಟ್ಟಿ ನೆಟ್‌ವರ್ಕ್‌ಗೆ ಸಂಬಂಧಿಸಿದ ಗ್ಯಾಂಗ್‌ನ ಇನ್‌ಸ್ಟಾಗ್ರಾಂ ಖಾತೆಯೊಂದಿಗೆ ಆರೋಪಿ ಸಂಪರ್ಕದಲ್ಲಿದ್ದ ಎನ್ನಲಾಗಿದೆ. ‘Hammadmemon333’ ಎಂಬ ಇನ್‌ಸ್ಟಾಗ್ರಾಂ ಖಾತೆಯ ಮೂಲಕ ಪಾಕಿಸ್ತಾನಿ ಗ್ಯಾಂಗ್‌ನೊಂದಿಗೆ ಸಂಪರ್ಕ ಹೊಂದಿದ್ದ ಆರೋಪ ಕೇಳಿಬಂದಿದೆ.
ಈ ಗ್ಯಾಂಗ್ ಗಣ್ಯ ವ್ಯಕ್ತಿಗಳು ಹಾಗೂ ಉದ್ಯಮಿಗಳಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದ ಆರೋಪಗಳಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿ ತನ್ನ ಆಧಾರ್ ಕಾರ್ಡ್ ಸೇರಿದಂತೆ ವೈಯಕ್ತಿಕ ದಾಖಲೆಗಳನ್ನು ನೀಡಿ ಆ ಖಾತೆಗೆ ಲಾಗಿನ್ ಆಗಿದ್ದ ಎನ್ನಲಾಗಿದ್ದು, ಕಳೆದ ಎರಡು ವರ್ಷಗಳಿಂದ ಇನ್‌ಸ್ಟಾಗ್ರಾಂ ಮೂಲಕ ಪಾಕಿಸ್ತಾನಿ ಗ್ಯಾಂಗ್‌ನೊಂದಿಗೆ ಸಂಪರ್ಕದಲ್ಲಿದ್ದ ಎಂಬ ಮಾಹಿತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಗ್ಯಾಂಗ್‌ನ ಸೂಚನೆಯಂತೆ ಕೇರಳ ಮತ್ತು ದೆಹಲಿಗೆ ತೆರಳಿ ತರಬೇತಿ ಪಡೆದು ಬಂದಿದ್ದ ಎಂಬ ಆರೋಪವೂ ಸೈಯದ್ ಅಬೂಬಕರ್ ವಿರುದ್ಧ ಕೇಳಿಬಂದಿದೆ.
ದೊಡ್ಡಬಳ್ಳಾಪುರದ ಇಸ್ಲಾಂಪುರದಲ್ಲಿರುವ ಮನೆಯಲ್ಲಿ ಇದ್ದ ವೇಳೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಎಸಿ ರಿಪೇರಿ ಕೆಲಸ ಮಾಡಿಕೊಂಡಿದ್ದು, ಬೆಂಗಳೂರಿನ ಮಸೀದಿಯೊಂದರಲ್ಲಿ ಪಾಠ ಮಾಡುತ್ತಿದ್ದ ಎನ್ನಲಾಗಿದೆ.
ಬಂಧಿತನ ವಿರುದ್ಧ BNS ಸೆಕ್ಷನ್ 113(3) ಹಾಗೂ 197(2) ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆದುಕೊಂಡಿರುವ ಪೊಲೀಸರು, ಪಾಕಿಸ್ತಾನಿ ನೆಟ್‌ವರ್ಕ್‌ನೊಂದಿಗೆ ಆತನ ಸಂಪರ್ಕ, ಸಾಮಾಜಿಕ ಜಾಲತಾಣದ ಚಟುವಟಿಕೆಗಳು ಹಾಗೂ ಇನ್ನಿತರರು ಈ ಜಾಲದಲ್ಲಿ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.



