HomeIndia Newsತಮಿಳುನಾಡು ಜನರಿಗೆ ಬಂಪರ್ ಸುದ್ದಿ: ವರ್ಷಕ್ಕೆ ಮೂರು ಸಿಲಿಂಡರ್ ಉಚಿತ ನೀಡಲಿದೆ ವಿಜಯ್ ಸರ್ಕಾರ!

ತಮಿಳುನಾಡು ಜನರಿಗೆ ಬಂಪರ್ ಸುದ್ದಿ: ವರ್ಷಕ್ಕೆ ಮೂರು ಸಿಲಿಂಡರ್ ಉಚಿತ ನೀಡಲಿದೆ ವಿಜಯ್ ಸರ್ಕಾರ!

For Dai;y Updates Join Our whatsapp Group

ಚೆನ್ನೈ: ತಮಿಳುನಾಡಿನ ಜನರಿಗೆ ಮುಖ್ಯಮಂತ್ರಿ ವಿಜಯ್ ನೇತೃತ್ವದ ಸರ್ಕಾರ ಭರ್ಜರಿ ಘೋಷಣೆ ಮಾಡಿದ್ದು, ಅರ್ಹ ಕುಟುಂಬಗಳಿಗೆ ವರ್ಷಕ್ಕೆ ಮೂರು ಎಲ್‌ಪಿಜಿ ಸಿಲಿಂಡರ್‌ಗಳನ್ನು ಉಚಿತವಾಗಿ ನೀಡಲು ಮುಂದಾಗಿದೆ. ‘ಅನ್ನಪೂರ್ಣಿ ಸೂಪರ್ ಸಿಕ್ಸ್’ ಹೆಸರಿನಲ್ಲಿ ಈ ಯೋಜನೆಯನ್ನು ಸರ್ಕಾರ ಘೋಷಿಸಿದೆ.

ವಾರ್ಷಿಕ ಆದಾಯ 2.5 ಲಕ್ಷ ರೂಪಾಯಿಗಿಂತ ಕಡಿಮೆ ಇರುವ ಕುಟುಂಬಗಳಿಗೆ ಈ ಯೋಜನೆ ಅನ್ವಯವಾಗಲಿದೆ. ಒಟ್ಟಾರೆ ಸುಮಾರು 1.30 ಕೋಟಿ ಕುಟುಂಬಗಳಿಗೆ ಯೋಜನೆಯಿಂದ ಪ್ರಯೋಜನ ದೊರೆಯಲಿದ್ದು, ಇದಕ್ಕಾಗಿ ಸರ್ಕಾರ ಸುಮಾರು 4,000 ಕೋಟಿ ರೂಪಾಯಿ ವೆಚ್ಚ ಮಾಡಲಿದೆ ಎಂದು ತಿಳಿಸಲಾಗಿದೆ.

ವಿಧಾನಸಭೆಯಲ್ಲಿ ಯೋಜನೆ ಕುರಿತು ಮಾತನಾಡಿದ ಮುಖ್ಯಮಂತ್ರಿ ವಿಜಯ್, ವಾರ್ಷಿಕ ಆದಾಯ 2.5 ಲಕ್ಷ ರೂಪಾಯಿಗಿಂತ ಮೀರದ ಕುಟುಂಬಗಳು, ಆರ್ಥಿಕವಾಗಿ ದುರ್ಬಲ ವರ್ಗಗಳು, ಸಣ್ಣ ಮತ್ತು ಅತಿ ಸಣ್ಣ ರೈತರ ಕುಟುಂಬಗಳು ಹಾಗೂ ಅಂಗವಿಕಲರನ್ನು ಹೊಂದಿರುವ ಕುಟುಂಬಗಳು ಯೋಜನೆಯ ವ್ಯಾಪ್ತಿಗೆ ಬರಲಿವೆ ಎಂದು ಹೇಳಿದರು.

ಯೋಜನೆಯಡಿ ಎಲ್‌ಪಿಜಿ ಸಿಲಿಂಡರ್ ಖರೀದಿಗೆ ಖರ್ಚಾಗುವ ಮೊತ್ತವನ್ನು ಮರುಪಾವತಿ ಮಾಡಲಾಗುತ್ತದೆ. ಸಂಬಂಧಪಟ್ಟ ಕಂಪನಿಗಳ ಅಧಿಕೃತ ಬಿಲ್ಲಿಂಗ್ ಆಧಾರದ ಮೇಲೆ ಸಿಲಿಂಡರ್ ಬುಕ್ಕಿಂಗ್ ಮತ್ತು ವಿತರಣೆ ಪೂರ್ಣಗೊಂಡ ಬಳಿಕ, ಯೋಜನೆಯ ಹಣವನ್ನು ಕುಟುಂಬದ ಯಜಮಾನಿಯ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಕೊಲ್ಲಿ ರಾಷ್ಟ್ರಗಳ ನಡುವಿನ ಸಂಘರ್ಷದಿಂದಾಗಿ ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದ್ದು, ಎಲ್‌ಪಿಜಿ ಬೆಲೆಯೂ ಏರಿಕೆಯಾಗುತ್ತಿದೆ. ಇದರಿಂದ ಕಳೆದ ನಾಲ್ಕು ತಿಂಗಳಲ್ಲಿ ಕುಟುಂಬಗಳ ಮೇಲಿನ ಆರ್ಥಿಕ ಹೊರೆ ಹೆಚ್ಚಾಗಿದೆ. ಅನೇಕ ಕುಟುಂಬಗಳು ಅಡುಗೆಗಾಗಿ ಪರ್ಯಾಯ ಇಂಧನಗಳತ್ತ ಮುಖ ಮಾಡುತ್ತಿರುವ ಹಿನ್ನೆಲೆಯಲ್ಲಿ ‘ಅನ್ನಪೂರ್ಣಿ ಸೂಪರ್ ಸಿಕ್ಸ್’ ಯೋಜನೆ ಜಾರಿಗೆ ತರಲಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ.

ಮಹಿಳೆಯರ ಜತೆಗೆ ತೃತೀಯ ಲಿಂಗಿಗಳಿಗೂ ಉಚಿತ ಬಸ್ ಪ್ರಯಾಣ

ಇದೇ ವೇಳೆ ‘ವೆಟ್ರಿ ಪಯಣಂ’ ಯೋಜನೆಯ ವ್ಯಾಪ್ತಿಯನ್ನು ವಿಸ್ತರಿಸುವುದಾಗಿಯೂ ಮುಖ್ಯಮಂತ್ರಿ ವಿಜಯ್ ಘೋಷಿಸಿದ್ದಾರೆ. ಪ್ರಸ್ತುತ ಮಹಿಳೆಯರಿಗೆ ಲಭ್ಯವಿರುವ ಉಚಿತ ಬಸ್ ಪ್ರಯಾಣದ ಸೌಲಭ್ಯವನ್ನು ತೃತೀಯ ಲಿಂಗಿಗಳಿಗೂ ವಿಸ್ತರಿಸಲಾಗುತ್ತದೆ.

ಅಕ್ಟೋಬರ್ 2ರ ಗಾಂಧಿ ಜಯಂತಿಯಿಂದ ವಿಸ್ತರಿತ ಯೋಜನೆ ಜಾರಿಗೆ ಬರಲಿದೆ. ಇದರಡಿ ಎಕ್ಸ್‌ಪ್ರೆಸ್, ಎಲ್‌ಎಸ್‌ಎಸ್, ಡಿಲಕ್ಸ್ ಹಾಗೂ ಅಂತರ್‌ಜಿಲ್ಲಾ ಬಸ್‌ಗಳಲ್ಲೂ ಅರ್ಹ ಫಲಾನುಭವಿಗಳಿಗೆ ಉಚಿತ ಪ್ರಯಾಣದ ಸೌಲಭ್ಯ ದೊರೆಯಲಿದೆ.

‘ವೆಟ್ರಿ ಪಯಣಂ’ ಯೋಜನೆಯ ಅನುಷ್ಠಾನದಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ ಸುಮಾರು 6,000 ಕೋಟಿ ರೂಪಾಯಿ ವೆಚ್ಚವಾಗಲಿದೆ. ಈ ಯೋಜನೆಗೆ ಯಾವುದೇ ಆದಾಯ ಮಿತಿ ಅಥವಾ ಪ್ರಯಾಣಗಳ ಸಂಖ್ಯೆಗೆ ಮಿತಿ ಇರುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img