HomeGadag Newsಭರವಸೆ ಬೇಡ, ಶಾಶ್ವತ ಪರಿಹಾರ ಬೇಕು

ಭರವಸೆ ಬೇಡ, ಶಾಶ್ವತ ಪರಿಹಾರ ಬೇಕು

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ನಗರದ ದಶಕಗಳ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂಬ ಆಗ್ರಹದೊಂದಿಗೆ Gen Z Voters and Citizens Forum ವತಿಯಿಂದ ಹಮ್ಮಿಕೊಂಡಿರುವ ರಕ್ತ ಸಹಿ ಅಭಿಯಾನಕ್ಕೆ ನಗರದ 35ನೇ ವಾರ್ಡ್‌ನಲ್ಲಿ ಯುವಕರು, ಮಹಿಳೆಯರು ಹಾಗೂ ನಾಗರಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು.

35ನೇ ವಾರ್ಡ್‌ನ ನಿವಾಸಿಗಳು ಸ್ವಯಂಪ್ರೇರಿತರಾಗಿ ಅಭಿಯಾನದಲ್ಲಿ ಪಾಲ್ಗೊಂಡು, ಗದಗ ನಗರಕ್ಕೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು, ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಬೇಕು ಹಾಗೂ ಸಂಕಷ್ಟದಲ್ಲಿರುವ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಒತ್ತಾಯಿಸಿ ರಕ್ತದ ಸಹಿ ಮೂಲಕ ತಮ್ಮ ಆಗ್ರಹವನ್ನು ವ್ಯಕ್ತಪಡಿಸಿದರು.

ಗದಗ-ಬೆಟಗೇರಿ ನಗರ ನಿವಾಸಿಗಳು ಹಲವು ವರ್ಷಗಳಿಂದ ಸಮರ್ಪಕ ಹಾಗೂ ನಿಯಮಿತ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಕುಡಿಯುವ ನೀರು ಪ್ರತಿಯೊಬ್ಬ ನಾಗರಿಕನ ಮೂಲಭೂತ ಅವಶ್ಯಕತೆಯಾಗಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕ ಕ್ರಮಗಳಿಗೆ ಸೀಮಿತವಾಗದೆ, ಮುಂದಿನ ಹಲವು ದಶಕಗಳ ಜನಸಂಖ್ಯೆ ಹಾಗೂ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಗದಗ ನಗರಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ ರೂಪಿಸಿ, ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಬೇಕು ಎಂದು ಅಭಿಯಾನದಲ್ಲಿ ಆಗ್ರಹಿಸಲಾಯಿತು.

ಶಿಕ್ಷಣ ಪಡೆದ ಗದಗ ಜಿಲ್ಲೆಯ ಯುವಕರು ಉದ್ಯೋಗಕ್ಕಾಗಿ ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ವಿವಿಧ ನಗರಗಳಿಗೆ ವಲಸೆ ಹೋಗುವ ಪರಿಸ್ಥಿತಿಗೆ ಕಡಿವಾಣ ಹಾಕಬೇಕು. ಜಿಲ್ಲೆಯಲ್ಲಿ ಕೈಗಾರಿಕೆಗಳು, ಕೃಷಿ ಆಧಾರಿತ ಉದ್ಯಮಗಳು ಹಾಗೂ ಕೌಶಲ್ಯಾಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸುವುದರ ಜೊತೆಗೆ ಹೊಸ ಹೂಡಿಕೆಗಳನ್ನು ಆಕರ್ಷಿಸಿ, ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ವಿಶೇಷ ಯೋಜನೆ ರೂಪಿಸಬೇಕು ಎಂಬುದು ಯುವಕರ ಪ್ರಮುಖ ಬೇಡಿಕೆಯಾಗಿದೆ.

ಗದಗದ ಯುವಶಕ್ತಿ ಉದ್ಯೋಗಕ್ಕಾಗಿ ಬೇರೆ ನಗರಗಳತ್ತ ಮುಖ ಮಾಡುವ ಪರಿಸ್ಥಿತಿ ಬಾರದಂತೆ, ಅವರ ಪ್ರತಿಭೆ ಹಾಗೂ ಪರಿಶ್ರಮಕ್ಕೆ ಜಿಲ್ಲೆಯಲ್ಲಿ ಅವಕಾಶ ಕಲ್ಪಿಸುವುದು ಸರ್ಕಾರದ ಆದ್ಯತೆಯಾಗಬೇಕು ಎಂದು ಒತ್ತಾಯಿಸಲಾಯಿತು.

ಇದೇ ವೇಳೆ ಮಳೆ ಕೊರತೆ, ಬೆಳೆ ನಷ್ಟ, ನೀರಾವರಿ ಸಮಸ್ಯೆ, ಹೆಚ್ಚುತ್ತಿರುವ ಕೃಷಿ ವೆಚ್ಚ ಹಾಗೂ ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ರೈತರ ನೆರವಿಗೆ ಸರ್ಕಾರ ಧಾವಿಸಬೇಕು ಎಂದು ಆಗ್ರಹಿಸಲಾಯಿತು. ರೈತರ ಪರಿಸ್ಥಿತಿಯನ್ನು ಸಮಗ್ರವಾಗಿ ಪರಿಶೀಲಿಸಿ ವಿಶೇಷ ಪರಿಹಾರ ಪ್ಯಾಕೇಜ್ ಘೋಷಿಸುವುದರ ಜೊತೆಗೆ ನೀರಾವರಿ ಸೌಲಭ್ಯ, ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ಹಾಗೂ ಕೃಷಿ ಅಭಿವೃದ್ಧಿಗೆ ದೀರ್ಘಕಾಲೀನ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಲಾಯಿತು.

ಈ ರಕ್ತ ಸಹಿ ಅಭಿಯಾನ ಯಾವುದೇ ಪಕ್ಷ ಅಥವಾ ವೈಯಕ್ತಿಕ ಹಿತಾಸಕ್ತಿಗಾಗಿ ನಡೆಸುತ್ತಿರುವ ಹೋರಾಟವಲ್ಲ. ಗದಗದ ನೀರು, ಯುವಕರ ಭವಿಷ್ಯ ಹಾಗೂ ರೈತರ ಬದುಕಿಗಾಗಿ ನಡೆಯುತ್ತಿರುವ ಜನಪರ ಅಭಿಯಾನವಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

35ನೇ ವಾರ್ಡ್‌ನ ಯುವಕರು, ಮಹಿಳೆಯರು ಹಾಗೂ ನಾಗರಿಕರು ಸ್ವಯಂಪ್ರೇರಿತರಾಗಿ ಅಭಿಯಾನದಲ್ಲಿ ಭಾಗವಹಿಸಿರುವುದು ನಗರದ ಅಭಿವೃದ್ಧಿ ಕುರಿತು ಜನರಲ್ಲಿ ಮೂಡುತ್ತಿರುವ ಜಾಗೃತಿಗೆ ಸಾಕ್ಷಿಯಾಗಿದೆ. ಅಭಿಯಾನದಲ್ಲಿ ಪಾಲ್ಗೊಂಡು ಜನಪರ ಹೋರಾಟಕ್ಕೆ ಶಕ್ತಿ ತುಂಬಿದ 35ನೇ ವಾರ್ಡ್‌ನ ಯುವಕರು, ಮಹಿಳೆಯರು, ನಾಗರಿಕರು ಹಾಗೂ ಮುಖಂಡರಿಗೆ Gen Z Voters and Citizens Forum ಕೃತಜ್ಞತೆ ಸಲ್ಲಿಸಿದೆ.

ರಕ್ತದ ಸಹಿಯಲ್ಲಿ ಮೊಳಗಿದ ಜನರ ಆಗ್ರಹ

ನಮ್ಮ ರಕ್ತದ ಪ್ರತಿಯೊಂದು ಸಹಿಯೂ ಗದಗದ ಅಭಿವೃದ್ಧಿಗಾಗಿ. ನಮ್ಮ ಹೋರಾಟ ಶಾಶ್ವತ ನೀರಿಗಾಗಿ. ನಮ್ಮ ಧ್ವನಿ ಯುವಕರ ಉದ್ಯೋಗಕ್ಕಾಗಿ. ನಮ್ಮ ಆಗ್ರಹ ರೈತರ ಬದುಕಿಗಾಗಿ. ಗದಗದ ಅಭಿವೃದ್ಧಿ ನಮ್ಮ ಹಕ್ಕು; ನ್ಯಾಯ ಸಿಗುವವರೆಗೂ ಜನರ ಧ್ವನಿ ನಿಲ್ಲುವುದಿಲ್ಲ ಎಂದು ಸಂಘಟನೆ ತಿಳಿಸಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img