HomeGadag Newsಸರ್ವರ್ ಕೈಕೊಟ್ಟು ಅನ್ನಭಾಗ್ಯ ಅಕ್ಕಿಗೆ ಪರದಾಟ; ಬೆಳಗ್ಗೆಯಿಂದ ಕಾದು ಕಾದು ಹೈರಾಣಾದ ಫಲಾನುಭವಿಗಳು!

ಸರ್ವರ್ ಕೈಕೊಟ್ಟು ಅನ್ನಭಾಗ್ಯ ಅಕ್ಕಿಗೆ ಪರದಾಟ; ಬೆಳಗ್ಗೆಯಿಂದ ಕಾದು ಕಾದು ಹೈರಾಣಾದ ಫಲಾನುಭವಿಗಳು!

For Dai;y Updates Join Our whatsapp Group

ಗದಗ: ಅನ್ನಭಾಗ್ಯ ಯೋಜನೆಯಡಿ ಪಡಿತರ ಅಕ್ಕಿ ಪಡೆಯಲು ಬಂದ ಫಲಾನುಭವಿಗಳು ಸರ್ವರ್ ಸಮಸ್ಯೆಯಿಂದ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಪರದಾಡಿದ ಘಟನೆ ಗದಗ ನಗರದಲ್ಲಿ ನಡೆದಿದೆ.

ನಗರದ ಎಪಿಎಂಸಿ ಯಾರ್ಡ್‌ನಲ್ಲಿರುವ ಪಡಿತರ ನ್ಯಾಯಬೆಲೆ ಅಂಗಡಿಯಲ್ಲಿ ಬೆಳಗ್ಗೆ 6 ಗಂಟೆಯಿಂದಲೇ ಫಲಾನುಭವಿಗಳು ಪಡಿತರಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದರು. ಆದರೆ ಸರ್ವರ್ ಸಮಸ್ಯೆಯಿಂದ ವಿತರಣೆ ಪ್ರಕ್ರಿಯೆ ಆರಂಭವಾಗದೆ, ಬೆಳಗ್ಗೆಯಿಂದ ಸುಮಾರು ಮೂರು ಗಂಟೆಗಳ ಕಾಲ ಕಾದು ನಿಲ್ಲುವಂತಾಯಿತು.

ಅಕ್ಕಿ ಪಡೆಯುವ ನಿರೀಕ್ಷೆಯಲ್ಲಿ ಬಂದ ವೃದ್ಧರು, ಮಹಿಳೆಯರು ಸೇರಿದಂತೆ ನೂರಾರು ಫಲಾನುಭವಿಗಳು ಬಿಸಿಲಿನಲ್ಲಿಯೇ ಸರತಿ ಸಾಲಿನಲ್ಲಿ ನಿಂತು ತಮ್ಮ ಸರದಿ ಬರುವುದನ್ನು ಕಾಯಬೇಕಾಯಿತು. ಅಂಗಡಿಯ ಮುಂದೆ ಜನದಟ್ಟಣೆ ಹೆಚ್ಚಾಗಿದ್ದರೂ ಸರ್ವರ್ ಸಮಸ್ಯೆ ಬಗೆಹರಿಯದ ಕಾರಣ ಫಲಾನುಭವಿಗಳಲ್ಲಿ ಅಸಮಾಧಾನ ಹೆಚ್ಚಾಯಿತು.

ಕೈಯಲ್ಲಿ ಚೀಲ; ಎದುರು ಸರ್ವರ್ ಸಮಸ್ಯೆ!

ಪಡಿತರ ಅಕ್ಕಿ ಪಡೆಯಲು ಚೀಲ ಹಿಡಿದುಕೊಂಡು ಬಂದಿದ್ದ ಫಲಾನುಭವಿಗಳು ಸರ್ವರ್ ಯಾವಾಗ ಸರಿಯಾಗುತ್ತದೆ ಎಂದು ಕಾದು ಕುಳಿತ ದೃಶ್ಯ ಕಂಡುಬಂತು. ಕೆಲವರು ಹಲವು ಗಂಟೆಗಳ ಕಾಲ ಕಾಯ್ದರೂ ಪಡಿತರ ಪಡೆಯಲು ಸಾಧ್ಯವಾಗದೆ ನಿರಾಸೆಯಿಂದ ಮನೆಗೆ ಮರಳುವ ಸ್ಥಿತಿ ನಿರ್ಮಾಣವಾಯಿತು.

ಗದಗ ಜಿಲ್ಲೆಯಾದ್ಯಂತ ಇದೇ ರೀತಿಯ ಸರ್ವರ್ ಸಮಸ್ಯೆ ಎದುರಾಗಿದೆ ಎಂದು ಫಲಾನುಭವಿಗಳು ದೂರಿದರು. ಪ್ರತಿ ತಿಂಗಳು ಪಡಿತರಕ್ಕಾಗಿ ನ್ಯಾಯಬೆಲೆ ಅಂಗಡಿಗೆ ಬರುವ ಬಡ ಕುಟುಂಬಗಳು ತಾಂತ್ರಿಕ ಸಮಸ್ಯೆಯಿಂದ ಪದೇಪದೇ ತೊಂದರೆ ಅನುಭವಿಸುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದುಡಿಮೆ ಬಿಟ್ಟು ಪಡಿತರಕ್ಕಾಗಿ ಕಾಯುವ ಸ್ಥಿತಿ:

ದಿನಗೂಲಿ ಕೆಲಸವನ್ನೇ ನಂಬಿಕೊಂಡು ಜೀವನ ನಡೆಸುವ ಅನೇಕ ಕುಟುಂಬಗಳ ಸದಸ್ಯರು ಬೆಳಗ್ಗೆಯೇ ಕೆಲಸಕ್ಕೆ ತೆರಳುವ ಬದಲು ಪಡಿತರಕ್ಕಾಗಿ ಸರತಿ ಸಾಲಿನಲ್ಲಿ ನಿಲ್ಲಬೇಕಾಯಿತು. ಗಂಟೆಗಟ್ಟಲೆ ಕಾಯಬೇಕಾದ ಕಾರಣ ಆ ದಿನದ ದುಡಿಮೆಯೂ ಕೈತಪ್ಪುವ ಆತಂಕ ಫಲಾನುಭವಿಗಳಲ್ಲಿದೆ.

“ಮನೆಯಲ್ಲಿ ಅಕ್ಕಿ ಖಾಲಿಯಾಗಿದೆ. ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಬೆಳಗ್ಗೆಯಿಂದ ಬಂದು ನಿಂತಿದ್ದರೂ ಸರ್ವರ್ ಸಮಸ್ಯೆಯಿಂದ ಅಕ್ಕಿ ಸಿಗುತ್ತಿಲ್ಲ” ಎಂದು ಫಲಾನುಭವಿಗಳು ಅಳಲು ತೋಡಿಕೊಂಡರು.

ಆಹಾರ ಇಲಾಖೆ ವಿರುದ್ಧ ಆಕ್ರೋಶ:

ಸರ್ವರ್ ಸಮಸ್ಯೆ ಪ್ರತಿಬಾರಿಯೂ ಫಲಾನುಭವಿಗಳನ್ನೇ ಸಂಕಷ್ಟಕ್ಕೆ ಸಿಲುಕಿಸುತ್ತಿದ್ದು, ಆಹಾರ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಫಲಾನುಭವಿಗಳು ಆಕ್ರೋಶ ವ್ಯಕ್ತಪಡಿಸಿದರು.

ತಾಂತ್ರಿಕ ಸಮಸ್ಯೆ ಇದ್ದಲ್ಲಿ ಅದನ್ನು ಶೀಘ್ರ ಬಗೆಹರಿಸಿ, ಪಡಿತರ ವಿತರಣೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಬಡವರು, ವೃದ್ಧರು ಮತ್ತು ಮಹಿಳೆಯರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ತಪ್ಪಿಸಬೇಕು ಎಂದು ಒತ್ತಾಯಿಸಿದರು.

ಪಡಿತರ ಪಡೆಯಲು ಬರುವ ಫಲಾನುಭವಿಗಳಿಗೆ ಅನಗತ್ಯ ತೊಂದರೆಯಾಗದಂತೆ ಸರ್ವರ್ ಸಮಸ್ಯೆಯನ್ನು ಕೂಡಲೇ ಬಗೆಹರಿಸಿ, ಬಾಕಿ ಇರುವ ಪಡಿತರವನ್ನು ಸಮರ್ಪಕವಾಗಿ ವಿತರಿಸಬೇಕು. ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ತೊಂದರೆಯಾಗದಂತೆ ಆಹಾರ ಇಲಾಖೆ ಅಧಿಕಾರಿಗಳು ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img