ಬೆಳಗಾವಿ: ವಾಟ್ಸಾಪ್ ಸ್ಟೇಟಸ್ಗೆ ಫೋಟೋ ಹಾಕಿದ್ದಕ್ಕೆ ಅನೈತಿಕ ಸಂಬಂಧದ ಶಂಕೆಯಲ್ಲಿ ವ್ಯಕ್ತಿಯೊಬ್ಬನನ್ನು ದಂಪತಿ ಸೇರಿ ಕುಡುಗೋಲಿನಿಂದ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕಲ್ಲೋಳಿ ಪಟ್ಟಣದಲ್ಲಿ ನಡೆದಿದೆ.
ಮೃತನನ್ನು ಗುಜನಟ್ಟಿ ಗ್ರಾಮದ ರಮೇಶ್ ಬಂಟ್ರೋಳಿ ಎಂದು ಗುರುತಿಸಲಾಗಿದೆ. ಕಲ್ಲೋಳಿ ಗ್ರಾಮದ ಬನಪ್ಪ ಒಡೆಯರ್ ಮತ್ತು ಆತನ ಪತ್ನಿ ಲಕ್ಷ್ಮೀ ಒಡೆಯರ್ ಕೊಲೆ ಆರೋಪಿಗಳಾಗಿದ್ದಾರೆ.
ರಮೇಶ್ಗೆ ಲಕ್ಷ್ಮೀ ಜೊತೆ ಅನೈತಿಕ ಸಂಬಂಧವಿದೆ ಎಂದು ಬನಪ್ಪ ಶಂಕಿಸಿದ್ದ ಎನ್ನಲಾಗಿದೆ. ರಮೇಶ್ ಮತ್ತು ಲಕ್ಷ್ಮೀ ಜೊತೆಯಲ್ಲಿದ್ದ ಫೋಟೋ ತೆಗೆದುಕೊಂಡು ಅದನ್ನು ವಾಟ್ಸಾಪ್ ಸ್ಟೇಟಸ್ಗೆ ಹಾಕಿದ್ದ. ಇದನ್ನು ನೋಡಿದ ಬನಪ್ಪ ಹಾಗೂ ಲಕ್ಷ್ಮೀ ಆಕ್ರೋಶಗೊಂಡಿದ್ದರು ಎನ್ನಲಾಗಿದೆ.
ಬಳಿಕ ಕಲ್ಲೋಳಿ ಗ್ರಾಮದ ಮನೆಯ ಹಿಂಭಾಗದ ಸೋಯಾಬಿನ್ ಜಮೀನಿನಲ್ಲಿ ರಮೇಶ್ನನ್ನು ಕುಡುಗೋಲಿನಿಂದ ತಲೆ ಹಾಗೂ ಕುತ್ತಿಗೆ ಭಾಗಕ್ಕೆ ಕೊಚ್ಚಿ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬನಪ್ಪ ಹಾಗೂ ಲಕ್ಷ್ಮೀ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಘಟನೆಯ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



