ಬೆಂಗಳೂರು: ಇನ್ನೊಂದು ತಿಂಗಳಲ್ಲಿ ಮದುವೆಯಾಗಬೇಕಿದ್ದ 24 ವರ್ಷದ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಕೆ.ಪಿ. ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯ ಕಡಪ ಸ್ವಾಮಿ ಮಠದ ಬಳಿ ನಡೆದಿದೆ. ಭೂಮಿಕಾ (24) ಆತ್ಮಹತ್ಯೆ ಮಾಡಿಕೊಂಡ ಯುವತಿ ಎಂದು ಗುರುತಿಸಲಾಗಿದೆ. ಪ್ರಕರಣದ ತನಿಖೆ ವೇಳೆ ಯುವತಿಯ ಕೊರಳಿನಲ್ಲಿ ಅರಿಶಿನದ ಕೊಂಬು ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಭೂಮಿಕಾಳ ಮದುವೆಯನ್ನು ಕಿರಣ್ ಎಂಬ ಯುವಕನೊಂದಿಗೆ ನಿಶ್ಚಯಿಸಲಾಗಿತ್ತು. ಇತ್ತೀಚೆಗೆ ಕಾಲೇಜಿನಿಂದ ಪ್ರವಾಸಕ್ಕೆ ತೆರಳಿ ವಾಪಸಾದ ಬಳಿಕ ಭೂಮಿಕಾ ಮನೆಯವರೊಂದಿಗೆ ಸರಿಯಾಗಿ ಮಾತನಾಡುತ್ತಿರಲಿಲ್ಲ ಎನ್ನಲಾಗಿದೆ.
ಮೊಬೈಲ್ನಲ್ಲಿ ಮಾತನಾಡುತ್ತಿದ್ದಾಗಲೇ ಆತ್ಮಹತ್ಯೆ?
ಗೌತಮ್ ಎಂಬ ಯುವಕ ಕಿರಣ್ಗೆ ಕರೆ ಮಾಡಿ ಭೂಮಿಕಾ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿದ್ದಾನೆ. ವಿಷಯ ತಿಳಿದ ಕಿರಣ್, ಯುವತಿಯ ಮಾವನಿಗೆ ಕರೆ ಮಾಡಿದ್ದಾನೆ. ಬಳಿಕ ಮಾವನೊಂದಿಗೆ ಸ್ಥಳಕ್ಕೆ ತೆರಳಿ ನೋಡಿದಾಗ ಭೂಮಿಕಾ ವೇಲ್ನಿಂದ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ.
ಕೂಡಲೇ ಕುಟುಂಬಸ್ಥರು ಆಕೆಯನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಭೂಮಿಕಾ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಯುವತಿ ಮೊಬೈಲ್ನಲ್ಲಿ ಮಾತನಾಡುತ್ತಿದ್ದಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಮಾಹಿತಿಯೂ ಲಭ್ಯವಾಗಿದೆ.
ಕೊರಳಲ್ಲಿ ಅರಿಶಿನದ ಕೊಂಬು ಪತ್ತೆ; ಪೊಲೀಸರಿಂದ ತನಿಖೆ
ಮರಣೋತ್ತರ ಪರೀಕ್ಷೆ ನಡೆಸುವ ಸಂದರ್ಭದಲ್ಲಿ ಭೂಮಿಕಾಳ ಕೊರಳಿನಲ್ಲಿ ಅರಿಶಿನದ ಕೊಂಬು ಇರುವುದು ಗಮನಕ್ಕೆ ಬಂದಿದೆ. ಈ ಅರಿಶಿನದ ಕೊಂಬನ್ನು ಯಾರು ಕಟ್ಟಿದ್ದರು ಎಂಬ ಬಗ್ಗೆ ಕುಟುಂಬಸ್ಥರಿಗೂ ಮಾಹಿತಿ ಇಲ್ಲ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಗೌತಮ್ನನ್ನು ಕರೆಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಅರಿಶಿನದ ಕೊಂಬಿನ ಹಿನ್ನೆಲೆ ಹಾಗೂ ಯುವತಿಯ ಸಾವಿಗೆ ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರಿದಿದೆ. ಈ ಸಂಬಂಧ ಕೆ.ಪಿ. ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಯುಡಿಆರ್ (ಅಸಹಜ ಸಾವು ವರದಿ) ಪ್ರಕರಣ ದಾಖಲಾಗಿದೆ.









